ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸ್ವಸಹಾಯ ಸಂಘಗಳನ್ನು ಕಟ್ಟಿ ನೂರಾರು ಬಡ ಕುಟುಂಬಗಳ ಮಹಿಳೆಯರು ಹಾಗೂ ಪುರುಷರಿಗೆ ಸ್ವಾವಲಂಬನೆಯ ಬದುಕು ತೋರಿಸಿರುವ ಸಾಧಕಿ. ನಡೆದಾಡಲು ಕಾಲುಗಳೇ ಬಾರದಿದ್ದರೂ ನಡೆದಾಡುವ ಅಪಾರ ಮಂದಿಗೆ ನೆರಳಾಗಿರುವ ನಾಯಕಿ, ನೂರಾರು ಬಡ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಬದುಕಿಗೆ ಬೆಳಕು ತೋರಿಸಿದಾಕೆ. ಈಕೆಯ ಹೆಸರು ಕೆ.ಎನ್. ಮಂಜುಳಾ, ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯ ನಿವಾಸಿ. 57 ರ ಪ್ರಾಯದ ಈ ಮಹಿಳೆ ಆ ಪ್ರದೇಶದ ನೂರಾರು ಮಹಿಳೆಯರ ಪಾಲಿಗೆ ನಿಜಾರ್ಥದಲ್ಲಿ ಪ್ರೀತಿಯ ಮಂಜುಳಕ್ಕನೇ ಆಗಿದ್ದಾರೆ. ಕೂಡ್ಲೂರು ಗ್ರಾಮದ ಗೌರಮ್ಮ ಹಾಗೂ ದಿ. ಕೆ.ಕೆ. ನಿಂಗಪ್ಪ ಅವರ ಪುತ್ರಿ ಮಂಜುಳಾ 47 ವರ್ಷಗಳ ಹಿಂದೆ ಮೂರನೇ ತರಗತಿ ಓದುತ್ತಿದ್ದಾಗ ಪಲ್ಸ್ ಪೋಲಿಯೋ ಕಾರಣದಿಂದ ಶಾಶ್ವತವಾಗಿ ಅಂಗವಿಕಲೆಯಾದವರು. ಓಡಾಡಿಕೊಂಡು ಇದ್ದ ಮಂಜುಳಾ ಅವರಿಗೆ ಪೋಲಿಯೋ ಬಾಧಿಸಿದ್ದರಿಂದ ಕಾಲುಗಳ ಸ್ವಾಧೀನ ಕಳೆದುಕೊಂಡರು. ಅಂದಿನಿಂದ ಇಂದಿನತನಕವೂ ಆ ಕುಟುಂಬದ ಸದಸ್ಯರು ಇವರ ನಿತ್ಯದ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಮಲಗುವುದು ಮತ್ತು ಕೂರುವುದು ಬಿಟ್ಟರೆ ನಡೆಯುವ ಹಾಗೆಯೇ ಇಲ್ಲದ ನತದೃಷ್ಟೆ ಮಂಜುಳಾ. ತನಗೆ ಕಾಡಿದ ಅಂಗವೈಕಲ್ಯಕ್ಕೆ ಅಂಜಲಿಲ್ಲ - ಅಳುಕಲಿಲ್ಲ. ಆರಂಭದ ಹತ್ತಾರು ವರ್ಷಗಳ ಕಾಲ ಕುಳಿತಲ್ಲೇ ಏನಾದರೊಂದು ಮಾಡಬೇಕು ಎಂದು ನಿರ್ಧರಿಸಿ ಕೆಲ ಕಾಲ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಹೆಣೆದರು. ಅವರು ಹೆಣೆಯುತ್ತಿದ್ದ ಆ ಬ್ಯಾಗ್‍ಗಳು ಅಕ್ಕಪಕ್ಕದ ಮಹಿಳೆಯರ ಗಮನ ಸೆಳೆದವು. ಕ್ರಮೇಣ ಆಸಕ್ತ ಮಹಿಳೆಯರಿಗೆ ಬ್ಯಾಗ್ ಹಾಗೂ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವುದನ್ನು ಹೇಳಿಕೊಟ್ಟು ಸಮಯ ಕಳೆಯುತ್ತಿದ್ದರು. ಕ್ರಮೇಣ ಬಡ ಕುಟುಂಬಗಳ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಸ್ವ-ಸಹಾಯ ಸಂಘಗಳನ್ನು ಕಟ್ಟಿ ಮುನ್ನಡೆಸಿದರು. ಇವರಲ್ಲಿನ ಪ್ರಾಮಾಣಿಕತೆ ಹಾಗೂ ನೆರವಿನ ಮನೋಭಾವ ಮತ್ತಷ್ಟು ಸ್ವ-ಸಹಾಯ ಸಂಘಗಳ ಹುಟ್ಟಿಗೆ ಕಾರಣವಾಯಿತು. ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಮಂಜುಳಾ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಸಂಘಗಳಿಗೆ ಸೇರಿಕೊಂಡರು. ಮಂಜುಳಾ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಘಗಳ ಆರ್ಥಿಕ ಚಟುವಟಿಕೆಗಳನ್ನು ಕಂಡ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಇವರನ್ನು ಹುಡುಕಿಕೊಂಡು ಬಂದು ಸಾಲ ನೀಡಲು ಮುಂದಾದವು. ಅಷ್ಟೇ ಅಲ್ಲ ಈ ಅಂಗವೈಕಲ್ಯತೆ ಮೀರಿದ ಸಾಧಕಿಯ ಬಗ್ಗೆ ಇತರ ಸಂಘಗಳ ಮಹಿಳೆಯರಿಗೆ ಅರಿವು ಮೂಡಿಸಿ ಆ ಸಂಘಗಳ ಬೆಳವಣಿಗೆಗೆ ಇವರು ಆದರ್ಶರಾದರು. ತಮ್ಮ ಸಾರಥ್ಯದ ಸ್ವಸಹಾಯ ಸಂಘಗಳಲ್ಲಿನ ಬಡ ಮಹಿಳೆಯರ ಕುಟುಂಬಗಳಲ್ಲಿ ಏರ್ಪಡುತ್ತಿದ್ದ ಸಾಂಸಾರಿಕ ಕಲಹಗಳು ಕೂಡ ಮಂಜುಳಾ ಅವರ ಚಾವಡಿಗೆ ಬಂದು ಇತ್ಯರ್ಥವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಕುಡಿದು ಮನೆಗೆ ಬಂದು ಮಕ್ಕಳು ಹಾಗೂ ಪತ್ನಿಯ ಜೊತೆ ಜಗಳ ತೆಗೆಯುತ್ತಿದ್ದ ಕುಡುಕ ಪತಿಯರನ್ನು ‘ಮಂಜುಳಕ್ಕನಿಗೆ ಹೇಳುತ್ತೇನೆ ನೀನು ಹಿಂಗೆ ಆಡ್ತಾ ಇದ್ರೆ’ ಎಂದು ಹೆದರಿಸಿ ಸರಿ ದಾರಿಗೆ ತಂದ ಪ್ರಸಂಗಗಳು ಅನೇಕ. ಕುಶಾಲನಗರ-ಕೂಡಿಗೆ ಮಾರ್ಗದ ಕೂಡ್ಲೂರು ಕೈಗಾರಿಕಾ ಬಡಾವಣೆಯ ಮುಖ್ಯ ರಸ್ತೆಯಂಚಿನಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡಿರುವ ಮಂಜುಳ ಅವರು, ಕಳೆದ 50 ವರ್ಷಗಳ ಹಿಂದಿನಿಂದಲೂ ಬೆಳೆದು ಬಂದಿರುವ ಈಶ್ವರನ ಪೂಜೆಗೆ ಪ್ರಿಯವಾದ ಬಿಲ್ವಪತ್ರೆ ಹೂ ಬಿಡುವ ಶಿವಮರದ ಬುಡವನ್ನು ಪೂಜಿಸಿಕೊಂಡು ಆ ಮರದ ನೆರಳಲ್ಲಿಯೇ ಇರುವ ಪುಟ್ಟ ಅಂಗಡಿಯೊಳಗಿನ ಕೋಣೆಯೊಂದರಲ್ಲೇ ವಾಸವಾಗಿದ್ದಾರೆ. ಪ್ರತೀ ವರ್ಷದ ಶಿವರಾತ್ರಿ ಹಬ್ಬದಂದು ಈ ಮರದ ಬುಡವನ್ನು ಪೂಜಿಸಿ ಭಕ್ತರಿಗೆ ಪ್ರಸಾದವನ್ನು ನೀಡುತ್ತಾ ಬರುತ್ತಿರುವ ಅವರಿಗೆ ಈ ವೃಕ್ಷವೇ ಕಾವಲು. ಇವರು ಕುಳಿತರೂ-ಮಲಗಿದರೂ ಸರಿ, ಅಂಗಡಿಗೆ ಬರುವ ಮಕ್ಕಳು ಮಹಿಳೆಯರೇ ತಾವು ತರುವ ಹಣಕ್ಕೆ ತಕ್ಕುದಾದ ವಸ್ತುವನ್ನು ತೆಗೆದುಕೊಂಡು ಇವರ ಹಣದ ಡಬ್ಬಿಗೆ ಹಾಕಿ ಹೋಗುತ್ತಾರೆ. ಇದು ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಡೆಯುವ ವ್ಯಾಪಾರ ಎನ್ನುತ್ತಾರೆ ಮಂಜುಳ. ಮಂಜುಳಾ ಅವರು ತಾವು ರಚಿಸಿರುವ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಪ್ರಸಿದ್ಧ ಯಾತ್ರಾ ಸ್ಥಳಗಳ ಪ್ರವಾಸ ರೂಪಿಸಿ ಅವರ ಜೊತೆಯಲ್ಲಿ ತೆರಳಿ ಬಂದಿದ್ದೂ ಉಂಟು. ಅಂಗವೈಕಲ್ಯ ಮೀರಿದ ಸಾಧಕಿ. ಮಂಜುಳ ಅವರಿಗೆ ನಿತ್ಯವೂ ಇವರ ತಮ್ಮಂದಿರ ಪತ್ನಿಯರಾದ ವೀಣಾ ಪವನ್ ಕುಮಾರ್ ಹಾಗೂ ಸುಕನ್ಯಾ ಗಣೇಶ್ ಅವರುಗಳು ಮಂಜುಳಾ ಅವರ ಪ್ರಾತರ್ವಿಧಿಗಳಿಗೆ ಸಹಕರಿಸಿ ಉಡುಪು ತೊಡಿಸಿ, ಊಟ, ತಿಂಡಿ ಮಾಡಿಸುತ್ತಾರೆ. ಈ ವಿಚಾರದಲ್ಲಿ ಕಿಂಚಿತ್ತೂ ಬೇಸರಿಸದೇ ತಮ್ಮ ತಾಯಂದಿರ ಸೇವೆ ಮಾಡುವಷ್ಟೇ ಕರುಣೆ ಹಾಗೂ ಸಂತಸದಿಂದ ಸೇವೆ ಮಾಡುತ್ತಾ ಬರುತ್ತಿದ್ದಾರೆ. ದುರ್ದೈವ ಎಂದರೆ ಇದೇ ಸಮಾಜ ಸೇವಕಿ ಮಂಜುಳ ಅವರ ಮತ್ತೋರ್ವ ಸಹೋದರಿ ಕಾವೇರಿ ಅವರಿಗೂ ಚಿಕ್ಕಂದಿನಲ್ಲೇ ಪೋಲಿಯೋ ಬಾಧಿಸಿದ್ದರಿಂದ ಮನೆಯಲ್ಲೇ ಇದ್ದಾರೆ. ಕಾವೇರಿ ಯವರಿಗೂ ಈ ವಾರಗಿತ್ತಿಯರ ಸೇವೆ ದೊರಕುತ್ತಿದ್ದು, ಸೇವೆಯಲ್ಲಿ ಇಡೀ ಊರಿಗೆ ಇವರುಗಳು ಮಾದರಿಯಾಗಿದ್ದಾರೆ. ಈ ಸಂದರ್ಭ “ಶಕ್ತಿ”ಯೊಂದಿಗೆ ಮಾತನಾಡಿದ ಸಾಧಕಿ ಮಂಜುಳಾ, ದೇವರು ನನಗೆ ನಡೆಯುವ ಭಾಗ್ಯ ಕೊಡದೇ ಹೋದರೂ ಮುತ್ತು ರತ್ನಗಳಿಗೂ ಮಿಗಿಲಾದ ಇಬ್ಬರು ನಾದಿನಿಯರನ್ನು (ಇಬ್ಬರು ತಮ್ಮಂದಿರ ಪತ್ನಿಯರು) ನನ್ನ ಸೇವೆ ಮಾಡಲು ಕರುಣಿಸಿದ್ದಾನೆ. ಈ ಇಬ್ಬರು ನಾದಿನಿಯರು ಹಾಗೂ ನನ್ನ ತಮ್ಮಂದಿರು ನನಗಾಗಿ ಮಿಡಿಯುವ ಆ ಮಿಡಿತಕ್ಕೆ ಬೆಲೆ ಕಟ್ಟಲಾಗುತ್ತಾ? ಎಂದು ಹೇಳಿ ಕಣ್ಣೊರೆಸಿಕೊಳ್ಳುತ್ತಾರೆ. ನಾನು ಸ್ವಸಹಾಯ ಸಂಘಗಳನ್ನು ಕಟ್ಟಿ ಮಹಿಳೆಯರಿಗೇನೋ ನೆರವಾದೆ. ಆ ಬಡ ಮಹಿಳೆಯರ ಬಾಳು ಬೆಳಗಿದರೆ ಅದೇ ನನಗೆ ಬಳುವಳಿ ಎನ್ನುತ್ತಾರೆ. ಸಾಧಕಿ ಮಂಜುಳಾ ಅವರ ಸೇವೆಯನ್ನು ಗುರುತಿಸಿರುವ ಹಲವು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. - ಕೆ.ಎಸ್. ಮೂರ್ತಿ, ಕುಶಾಲನಗರ.