ಮಡಿಕೇರಿ, ಮಾ. 5: ಸುಂಟಿ ಕೊಪ್ಪ ಸಮೀಪದ ಗರಗಂದೂರು ಹರದೂರು ಕಾಜೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ತಾ. 6 ರಿಂದ 9 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಮಾಅತ್ ಸದಸ್ಯ ಮುಸ್ತಫ ಸಖಾಫಿ ಅವರು, ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ತಾ. 6 ರಂದು (ಇಂದು) ಜುಮಾ ನಮಾಜಿನ ಬಳಿಕ ಜಮಾ ಅತ್ ಮತ್ತು ಉರೂಸ್ ಕಮಿಟಿಯ ಅಧ್ಯಕ್ಷ ಕೆ. ಹನೀಫರವರು ಧ್ವಜಾ ರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.

ತಾ. 7 ರಂದು ಮಗ್ರೀಬ್ ನಮಾಜಿನ ನಂತರ ಬಹು ಹನೀಫಾ ಸಖಾಫಿಯವರ ನೇತೃತ್ವದಲ್ಲಿ ಖತಮುಲ್ ಖುರ್‍ಆನ್ ಮಜ್ಲಿಸ್ ನಡೆಯಲಿದೆ. ತಾ. 8 ರಂದು ಸಂಜೆ 7 ಗಂಟೆಗೆ ನಾರಿಯತ್ತ್ ಸ್ವಲಾತ್ ವಾರ್ಷಿಕೋತ್ಸವ, ಬುರ್ದಾ ಮಜ್ಲಿಸ್ ಹಾಗೂ ಧರ್ಮೋಪದೇಶಗಳು ನಡೆಯಲಿದ್ದು, ಬುರ್ದಾ ಮಜ್ಲ್ಲಿಸ್‍ಗೆ ಖಮರುದ್ದೀನ್ ಸಖಾಫಿ, ಜಾಬಿರ್ ಅಮಾನಿ, ಸಿದ್ದೀಕ್ ಫಾಳಿಲಿ ನೇತೃತ್ವ ವಹಿಸಲಿದ್ದಾರೆಂದು ತಿಳಿಸಿದರು.

ಅಂದು ರಾತ್ರಿ 8 ಗಂಟೆಗೆ ಕೊಡಗು ಜಿಲ್ಲಾ ಉಪ ಖಾಝಿ ಕೆ.ಎ. ಮಹಮ್ಮೂದ್ ಮುಸ್ಲಿಯಾರ್ ಎಡಪಾಲ ಪ್ರಾರ್ಥನೆ ನಡೆಸಿಕೊಡಲಿದ್ದಾರೆ. ಬಳಿಕ ಬಹು ಅಶ್ರಫ್ ಅಹ್‍ಸನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಲ್ಲಪ್ಪುರಂನ ಯಾಸಿರ್ ಸಖಾಫಿ ಅಲ್ ಅಝ್‍ಹರಿ ‘ಸ್ವಲಾತ್‍ನ ಮಹತ್ವ’ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಗರಗಂದೂರು ಕಾಜೂರು ಜಮಾಅತ್ ಅಧ್ಯಕ್ಷ ಕೆ. ಹನೀಫ್ ಹಾಗೂ ಉಲಮಾ ಉಮರಾ, ನೇತಾರರು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ರಾತ್ರಿ 10 ಗಂಟೆಗೆ ಎರುಮಾಡು ತಂಙಳ್ ಸಯ್ಯದ್ ಇಲ್ಯಾಸ್ ಖಾಮಿಲ್ ಸಖಾಫಿ ಅಲ್ ಹೈದ್ರೋಸಿ ನೇತೃತ್ವದಲ್ಲಿ ನಾರಿಯತ್ ಸ್ವಲಾತ್ ದ್ಸಿಕ್ರ್ ದುಆ ಮಜ್ಲ್ಲಿಸ್ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. 9 ರಂದು ಬೆಳಿಗ್ಗೆ 10 ಗಂಟೆಗೆ ಮೌಲೂದ್ ಪಾರಾಯಣದೊಂದಿಗೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಜಮಾಅತ್‍ನ ಪ್ರಧಾನ ಉಪಾಧ್ಯಕ್ಷ ಎಂ.ಕೆ. ಮುಸ್ತಫಾ ಅಧ್ಯಕ್ಷತೆ ವಹಿಸಲಿದ್ದಾರೆ. ಖತೀಬ ಹನೀಫ ಸಖಾಫಿ ಗೂಡಲೂರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಧರ್ಮ ಗುರುಗಳಾದ ಟಿ.ವಿ. ಹುಸೈನ್ ತಂಙಳ್ ಆದೂರ್ ಹಾಗೂ ಎರುಮಾಡು ತಂಙಳ್ ಆಶೀರ್ವಚನ ನೀಡಲಿದ್ದು, ರಾಜ್ಯದ ಸುನ್ನಿ ವಿದ್ವಾಂಸ ನೂರುದ್ದೀನ್ ಝಹ್‍ರಿ ಮುಖ್ಯ ಭಾಷಣ ಮಾಡಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಕೆ. ಹನೀಫ, ಕಾರ್ಯದರ್ಶಿ ಎ. ಅಬ್ದುಲ್ ರೆಹಮಾನ್, ಸದಸ್ಯರುಗಳಾದ ಸಿ.ಎಂ. ಉಮ್ಮರ್, ಕೆ.ಎಂ. ಅನೀಫ ಉಪಸ್ಥಿತರಿದ್ದರು.