ಮಡಿಕೇರಿ, ಮಾ. 5: ನಗರದ ಐತಿಹಾಸಿಕ ಕೋಟೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವೀಕ್ಷಣೆ ಮಾಡಿದರು. ದುರಸ್ತಿ ಕಾರ್ಯ ವೀಕ್ಷಿಸಿ ಎರಡು ತಿಂಗಳ ಒಳಗಾಗಿ ಕೋಟೆಯ ಮೇಲ್ಛಾವಣಿ ಸರಿಪಡಿಸುವ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರವು ಕೋಟೆ ಮೇಲ್ಛಾವಣಿ ದುರಸ್ತಿ ಕಾರ್ಯಕ್ಕೆ ಒಟ್ಟು ರೂ. 54 ಲಕ್ಷ ಬಿಡುಗಡೆ ಮಾಡಿದ್ದು, ಮೊದಲನೆ ಹಂತದಲ್ಲಿ ರೂ. 40 ಲಕ್ಷ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.

ಪಾರಂಪರಿಕ ವಾಸ್ತುಶಿಲ್ಪ ಹೊಂದಿರುವ ಮಡಿಕೇರಿ ಐತಿಹಾಸಿಕ ಕೋಟೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದ್ದು, ಕಂದಾಯ ಇಲಾಖೆಯು ಈಗಾಗಲೇ ರೂ. 8 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದ್ದು, ಹೆಚ್ಚುವರಿಯಾಗಿ ರೂ. 2 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.