ಮಡಿಕೇರಿ, ಮಾ. 6: ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಹರಿಹರ ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆ ಇಂದು ಶ್ರೀಮಂಗಲ ಹರಿಹರ ಗ್ರಾಮದ ಚಿಮ್ಮುಣೀರ ಹರೀಶ ಎಂಬಾತ ಗದ್ದೆಯ ಸಮೀಪದಲ್ಲಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿಯಿಂದ ಅಕ್ರಮವಾಗಿ ಮರಳು ತೆಗೆಸಿ ಸಂಗ್ರಹಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿದ್ದ ಸುಮಾರು 5 ರಿಂದ 6 ಲಾರಿಗಳಷ್ಟು ಮರಳು ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ನಾಲ್ಕು ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆದಿದ್ದು, ಆರೋಪಿ ಚಿಮ್ಮುಣೀರ ಹರೀಶನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಪ್ರಭಾರ ಇನ್ಸ್‍ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್‍ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಬಿ.ಜೆ. ಶರತ್ ರೈ ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.