ಕುಶಾಲನಗರ, ಮಾ. 6: ಕುಶಾಲನಗರದ ಕೇರಳ ಸಮಾಜ ಆಶ್ರಯದಲ್ಲಿ ತಾ. 8 ರಂದು ದಂತ ಮತ್ತು ನೇತ್ರ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಪ್ರಮುಖರಾದ ಬಿ.ಸಿ. ಆನಂದ್ ತಿಳಿಸಿದರು.
ಕುಶಾಲನಗರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ಇಂದಿರಾ ಬಡಾವಣೆಯಲ್ಲಿರುವ ಕೇರಳ ಸಮಾಜದ ಕಟ್ಟಡದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದ್ದು ಮೊದಲು ಬರುವ 50 ಮಂದಿ ಫಲಾನುಭವಿಗಳಿಗೆ ಮತ್ತು ಮಕ್ಕಳಿಗೆ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಸಂಘದ ಸಲಹೆಗಾರ ಪಿ. ರವೀಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ಹರಿಸಲಾಗಿದೆ. ಪ್ರಥಮ ಬಾರಿಗೆ ಆರೋಗ್ಯ ತಪಾಸಣಾ ಶಿಬಿರ ಉಚಿತವಾಗಿ ಹಮ್ಮಿಕೊಂಡಿದ್ದು ಅಂಗಾಂಗ ದಾನ ನೋಂದಣಿ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದನ್, ಉಪಾಧ್ಯಕ್ಷ ಎಂ.ಜಿ. ಪ್ರಕಾಶ್, ಕಾರ್ಯದರ್ಶಿ ಕೆ.ಜೆ. ರಾಬಿನ್, ಸಲಹಾ ಸಮಿತಿಯ ಕೆ.ಕೆ. ಭಾಸ್ಕರ್, ಸದಸ್ಯರಾದ ಕೆ.ಆರ್. ರಾಜೇಶ್ ಇದ್ದರು.