ಶನಿವಾರಸಂತೆ, ಮಾ. 3: ಪ್ರಾಮಾಣಿಕ ರಾಜಕಾರಣ ಮಾಡಿದ ಮೊರಾರ್ಜಿ ದೇಸಾಯಿ ರಾಷ್ಟ್ರಕ್ಕೆ ದಿಕ್ಸೂಚಿಯಾದ ಮಹಾನ್ ವ್ಯಕ್ತಿಯಾಗಿದ್ದು ರಾಷ್ಟ್ರದ ಹೆಮ್ಮೆ ಎನಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಅಭಿಪ್ರಾಯಪಟ್ಟರು.
ಸಮೀಪದ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಮೊರಾರ್ಜಿ ದೇಸಾಯಿ ಅವರ 124ನೇ ಜಯಂತಿ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಜ್ಜನ ರಾಜಕಾರಣಿ ಮೊರಾರ್ಜಿ ದೇಸಾಯಿ ಹೆಸರಿನಲ್ಲಿ ವಸತಿ ಶಾಲೆಗಳು ದೇಶದಾದ್ಯಂತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಪ್ರಸಿದ್ಧಿ ಪಡೆದಿವೆ. ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿವೆ. ಆಲೂರು ಸಿದ್ದಾಪುರದ ವಸತಿ ಶಾಲೆ ಪಠ್ಯದೊಂದಿಗೆ ಕ್ರೀಡೆಯಲ್ಲೂ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.
ಕೂಡಿಗೆ ಡಯಟ್ ಪ್ರಾಂಶುಪಾಲ ಕೆ.ವಿ. ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಭವಿಷ್ಯಕ್ಕೆ ಬೆಳಕಾದ ರಾಷ್ಟ್ರದ ಮಾಜಿ ಪ್ರದಾನಿ ದೇಸಾಯಿ ಅವರು ಶಾಲೆಗಳ ಜನಕ ಎಂದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕಗಳಿಸಿ ಸಾಧನೆ ಮಾಡಿದರೆ ಸಾಕೆಂಬ ನಿರೀಕ್ಷೆ ಇಟ್ಟುಕೊಳ್ಳುವುದರ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕøತಿಯನ್ನು ಕಲಿಸಿಕೊಡಬೇಕು ಎಂದರು.
ಶಿವಮೊಗ್ಗದ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿದರು. ಸಾಧಕರಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ ಇಲಾಖೆ ನಿವೃತ್ತ ವ್ಯವಸ್ಥಾಪಕ ಪುಟ್ಟರಾಜ್, ನಿವೃತ್ತ ಅಧಿಕಾರಿ ಮಲ್ಲೇಶ್ ಶೆಟ್ಟಿ, ಕ್ರಿಯಾಶೀಲ ಶಿಕ್ಷಕ ಡಿ.ಪಿ. ಸತೀಶ್. ವಿ. ಅಲೋಕ್, ಟಿ.ಎಲ್. ಲೋಲಾಕ್ಷಿ ಹಾಗೂ ದಾನಿಗಳಾದ 14 ಮಂದಿ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಂಶುಪಾಲೆ ಕೆ.ಎನ್. ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸೈ ಹೆಚ್.ಬಿ. ಜಯಮ್ಮ ಪ್ರಮುಖ ಮನುಕುಮಾರ್ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಧ್ವಜಕಂಬದ ಮುಂದೆ ಓಂಕಾರ ರಂಗೋಲಿ ನಡುವೆ ಹಣತೆಗಳನ್ನು ಬೆಳಗಿಸಿ ವಿನೂತನವಾಗಿ ಬೀಳ್ಕೊಡಲಾಯಿತು.