ಸೋಮವಾರಪೇಟೆ, ಮಾ. 3: ಸಮೀಪದ ಕೂತಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ರೂ. 48 ಲಕ್ಷ ವೆಚ್ಚದ ವಕ್ಕಲಿಗರ ಸಮುದಾಯ ಭವನದ ಉದ್ಘಾಟನೆಯನ್ನು ದಾನಿಗಳು ಹಾಗೂ ಗ್ರಾಮದ ಪ್ರಮುಖರಾದ ಚನ್ನಮ್ಮ ಕುಮಾರಪ್ಪ ಅವರು ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭಾಗವಹಿಸಿ ಮಾತನಾಡಿ, ಪ್ರತಿಯೋರ್ವರೂ ಸಮಾಜದ ಏಳಿಗೆಗೆ ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಸಮುದಾಯ ಭವನಗಳ ನಿರ್ಮಾಣದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ. ಇಂತಹ ಭವನಗಳ ನಿರ್ಮಾಣಕ್ಕೆ ದಾನಿಗಳೂ ಸಹ ಕೈಜೋಡಿಸಿರುವದು ಶ್ಲಾಘನೀಯ ಎಂದರು.

ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಅವರುಗಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳೂ ಸಹ ತಾವು ಬೆಳೆದು ದೊಡ್ಡವರಾದಂತೆ ತಂದೆ ತಾಯಿಯನ್ನು ಗೌರವದಿಂದ ನೋಡಿಕೊಳ್ಳಬೇಕು. ವೃದ್ಧರನ್ನು ಗೌರವಿಸುವ ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ದಾನಿ ಹರಪಳ್ಳಿ ರವೀಂದ್ರ ಮಾತನಾಡಿ, ಪ್ರತಿಯೋರ್ವರೂ ಪರಮಾತ್ಮ ಮೆಚ್ಚುವಂತೆ ಬದುಕಬೇಕು. ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನಾದರೂ ಸಮಾಜ ಕಾರ್ಯಕ್ಕೆ ವಿನಿಯೋಗಿಸಬೇಕು. ಆ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆ ಕಾಣಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಸಮಿತಿಯ ಪರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಧರ್ಮಪ್ಪ, ದಾನಿಗಳಾದ ಅರುಣ್‍ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಚೌಡ್ಲು ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೈ. ಪ್ರಕಾಶ್, ದಾನಿಗಳಾದ ಪೊನ್ನಮ್ಮ, ಗ್ರಾ.ಪಂ. ಅಧ್ಯಕ್ಷೆ ಭಾರತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.