ಕಡಂಗ, ಮಾ. 3: ಕಡಂಗ ಐದನೇ ಆವೃತ್ತಿಯ ಕೆಪಿಎಲ್ ಕ್ರಿಕೆಟ್ ಪಂದ್ಯಾಟವು ಕಡಂಗ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಪಾಲ್ಗೊಂಡು ಬ್ಲಾಸ್ಟರ್ಸ್ ಕಡಂಗ ಮತ್ತು ರೆಡ್ ಬ್ಯಾಕ್ಸ್ ತಂಡವು ಫೈನಲ್ ಪ್ರವೇಶಿಸಿ ಬ್ಲಾಸ್ಟರ್ಸ್ ತಂಡವು ರೋಚಕ ಗೆಲುವು ಪಡೆದು ಐದನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸೆಮಿಫೈನಲ್ ಪಂದ್ಯಾಟದಲ್ಲಿ ಬ್ಲಾಸ್ಟರ್ಸ್ ತಂಡವು ವಿ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿತು. ಬ್ಲಾಸ್ಟರ್ಸ್ ತಂಡದ ನಾಯಕ ಜುನೈದ್ ಅವರ ಅಮೋಘ ಬೌಲಿಂಗ್ ದಾಳಿಯಿಂದ ವಿಜಯಶಾಲಿ ಯಾಯಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರೆಡ್ ಬ್ಯಾಕ್ಸ್ ತಂಡದ ನೌಷಾದ್ ಅವರ ಅಮೋಘ ಪ್ರದರ್ಶನದಲ್ಲಿ ವಿ ಕಿಂಗ್ಸ್ ತಂಡವನ್ನು ಮಣಿಸಿ ರೆಡ್ ಬ್ಯಾಕ್ಸ್ ತಂಡವು ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯ ಐದು ಓವರ್‍ನಲ್ಲಿ ಮೊದಲು ಬ್ಯಾಟ್ ಬೀಸಿದ ರೆಡ್ ಬ್ಯಾಕ್ಸ್ ತಂಡವು 39 ರನ್ ಕಲೆ ಹಾಕಿತು. ಮೊತ್ತವನ್ನು ಬೆನ್ನಟ್ಟಿ ಬ್ಲಾಸ್ಟರ್ ತಂಡವು ವಿಜಯದ ಪತಾಕೆ ಹಾರಿಸಲು ಕೊನೆಯ ಎಸೆತದವರೆಗೆ ಕಾಯಬೇಕಾಯಿತು.
ಕೊನೆಯ ಓವರ್‍ನ ಕೊನೆಯ ಎಸೆತದಲ್ಲಿ ಆರು ರನ್‍ಗಳ ಅವಶ್ಯಕತೆ ಇರುವಾಗ ತಂಡದ ಉಪ ನಾಯಕ ಅಜರ್ ಆಕರ್ಷಕ ಸಿಕ್ಸರ್ ಬಾರಿಸಿ ಕ್ರೀಡಾಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣರಾದರು. ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ವಹಿಸಿ ಈ ಕ್ರೀಡೆಯಿಂದ ನಮ್ಮ ಊರಿನ ಸುತ್ತಮುತ್ತಲಿರುವ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿ ಸಹಕಾರಿಯಾಗಿದೆ. ಇದೇ ರೀತಿ ಎಲ್ಲಾ ವರ್ಷಗಳಲ್ಲೂ ಕ್ರೀಡೆ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿ ಟಿಎಸ್‍ಕೆ ಕೊಂಡಂಗೇರಿ ಮಾತನಾಡಿ, ಕ್ರೀಡೆಯಿಂದ ಸೌಹಾರ್ದ ಬೆಳೆಯಲು ಕಾರಣವಾಗುತ್ತದೆ ಎಂದು ನುಡಿದರು. ಗ್ರಾಮ ಪಂಚಾಯಿತಿ ಸದಸ್ಯ ಕೋಡಿರ ಪ್ರಸನ್ನ ತಮ್ಮಯ್ಯ ಕ್ರೀಡೆಯಿಂದ ಊರಿನಲ್ಲಿ ಹಬ್ಬದ ವಾತಾವರಣ ಎದ್ದು ಕಾಣುತ್ತಾ ಇದೆ. ಮುಂದಿನ ಎಲ್ಲ ವರ್ಷಗಳಲ್ಲಿ ಕ್ರೀಡೆ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಆಶಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಕಣಿಯರ ಕ್ರೀಡೆಯಿಂದ ನಮ್ಮ ಭಾಗದ ಆಟಗಾರರಿಗೆ ಉತ್ತಮ ವೇದಿಕೆ ಮತ್ತು ಇದಕ್ಕೆ ಎಲ್ಲಾ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಬಲ್ಲಚಂಡ ಟ್ಟಿಟ್ಟು, ರಾಜಕೀಯ ಕ್ಷೇತ್ರದಲ್ಲಿ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಸಾಮಾಜಿಕ ಕ್ಷೇತ್ರದಲ್ಲಿ ಟಿಎಸ್‍ಕೆ ಕೊಂಡಂಗೇರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ ಗಳಿಗೆ ಪಾರಿತೋಷಕ ನೀಡಲಾಯಿತು. ಕ್ರೀಡಾಕೂಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬ್ಲಾಸ್ಟರ್ಸ್ ತಂಡದ ಜಲೀಲ್, ಪಂದ್ಯ ಪುರುಷೋತ್ತಮ ಅಜರ್, ಉತ್ತಮ ಬೌಲಿಂಗ್ ಜುನೈದ್, ಉತ್ತಮ ಕ್ರೀಡಾಪಟು ನೌಷಾದ್ ರೆಡ್‍ಬ್ಯಾಕ್, ಉತ್ತಮ ವಿಕೆಟ್ ಕೀಪರ್ ಸತ್ತಾರ್, ಉತ್ತಮ ಫೀಲ್ಡಿಂಗ್ ಸಿನಾನ್, ಅತಿ ಹೆಚ್ಚು ಸಿಕ್ಸ್ ಬಾರಿಸಿದ ಕರೀಮ್, ಶಿಸ್ತಿನ ತಂಡ ವಿಕಿಂಗ್ಸ್, ಉದಯೋನ್ಮುಖ ಆಟಗಾರ ಮಣಿಶೇಖರ್ ಅವರು ಪ್ರಶಸ್ತಿಗೆ ಅರ್ಹರಾದರು. ಅತಿಥಿಗಳಾಗಿ ಸಲಾಂ ಆರ್ಮಿ, ರಂಜಿ ಮುಕ್ಕಾಟಿರ ಕಾವೇರಮ್ಮ, ಭರತ್ ಬೋಪ್ಪಣ್ಣ , ಜುನೈದ್ ಅಲ್ ಅಮೀನ್, ಕರೀಮ್ ಲಿಮ್ರಾ ಮುಸ್ತಫ, ಪ್ರದೀಪ್ ಆರ್ಮಿ, ಅಬೂಬಕ್ಕರ್ ಟಿ.ಕಾಮ್, ಅಬುಬಕ್ಕರ್ ಎಂ.ಎ. ಸಮದ, ಷರೀಫ್ ಪಾಲ್ಗೊಂಡಿದ್ದರು.
ಕ್ರೀಡಾಕೂಟದಲ್ಲಿ ತಾಂತ್ರಿಕ ವಿಭಾಗದಲ್ಲಿ ಹರ್ಷಾದ್ ಪಿ.ಎ ಜಾಫರ್ ಎಂ ಬಿ , ನಿಜಾಮುದ್ದೀನ್ ಕಾರ್ಯ ನಿರ್ವಹಿಸಿ ದರು. ಈ ಸಂದರ್ಭ ಸ್ವಾಗತವನ್ನು ಕರೀಮ್ ಹಾಗೂ ವಂದನೆಯನ್ನು ಇಕ್ಬಾಲ್ ನೆರವೇರಿಸಿದರು.
- ನೌಫಾಲ್ ಎಂ.ಬಿ.