ನಾಪೋಕ್ಲು, ಮಾ. 1: ಪರಿಸರಕ್ಕೆ ಪೂರಕವಾದ ವಸ್ತುಗಳ ತಯಾರಿ ಹಾಗೂ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ – ಮಡಿಕೇರಿ ಹಾಗೂ ಮೈಸೂರಿನ ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಸಹಯೋಗದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಯೋಜನೆಯ ಜಂಟಿ ಬಾದ್ಯತಾ ಸಂಘಗಳ 55 ಮಂದಿ ಸದಸ್ಯರಿಗೆ ಕಾಗದ ಕೈಚೀಲ ತಯಾರಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದೇಶ ಬದಲಾವಣೆಯ ಪಥದಲ್ಲಿ ಸಾಗುತ್ತಿದೆ. ಅತ್ಯುತ್ತಮವಾದ ಸಮಾಜಕ್ಕೆ ಪರಿಸರಕ್ಕೆ ಉಪಯುಕ್ತವಾದ ಕಾರ್ಯಾಗಾರವನ್ನು ಯೋಜನೆಯು ಹಮ್ಮಿಕೊಂಡಿದೆ. ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಪ್ರತಿಯೊಬ್ಬರೂ ಪಣತೊಡಬೇಕು ಎಂದರು. ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳ ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ ಮನುಷ್ಯನ ಸರ್ವತೋಮುಖ ಸದೃಡತೆಗಾಗಿ ತರಬೇತಿಗಳು ಪ್ರಮುಖವಾದ ಪಾತ್ರಗಳನ್ನು ವಹಿಸುತ್ತವೆ ಎಂದರು.

ಕಾರ್ಯಾಗಾರದಲ್ಲಿ ಉಪನ್ಯಾಸಕ ಶಿವಕುಮಾರ್ ಆರ್. ಸಂಪನ್ಮೂಲ ವ್ಯಕ್ತಿಯಾಗಿ ಸುಧಾಮಣಿ ಪಾಲ್ಗೊಂಡು ವಿವಿಧ ಬಗೆಯ ಕೈಚೀಲಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ಸದಸ್ಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಲಯ ಮೇಲ್ವಿಚಾರಕ ಸಂತೋಷ್‍ಕೆ. ಸ್ವಾಗತಿಸಿದರು. ತಾಲೂಕಿನ ಕೃಷಿ ಮೇಲ್ವಿಚಾರಕ ಚೇತನ್ ಕೆ. ನಿರೂಪಿಸಿದರು. ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.