ವೀರಾಜಪೇಟೆ, ಮಾ. 1: ಮಲೆನಾಡಾದ ಕೊಡಗಿನಲ್ಲಿ ಇಂದಿಗೂ ಕ್ರೀಡೆ ಹಾಗೂ ಸಾಹಿತ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಕಲೆಗೂ ಉತ್ತಮ ಪ್ರೋತ್ಸಾಹÀ ದೊರೆಯಬೇಕು. ಇದರಿಂದ ಶಾಲೆಯಲ್ಲಿ ಶಿಕ್ಷಣದೊಂದಿಗೆ ಕ್ರೀಡೆ, ಸಾಹಿತ್ಯ, ಕಲಾ ಕ್ಷೇತ್ರ ಬೆಳವಣಿಗೆಗೆ ಅವಕಾಶವಾಗಲಿದೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿರುವ ಶಾನ್‍ಭೋಗ್ ಕಟ್ಟಡದಲ್ಲಿ ದೇವಣಗೇರಿಯ ಸೋಲೋ ಎಕ್ಷಿಬಿಷನ್ ತಂಡದ ವತಿಯಿಂದ ದೇವಣಗೇರಿ ಗ್ರಾಮದ ಕಾಫಿ ಬೆಳೆಗಾರ ಪಾಲೇಕಂಡ ಅಯ್ಯಪ್ಪ ಅವರೇ ರಚಿಸಿದ ಚಿತ್ರಗಳ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಸ್ವಾಮೀಜಿ ಚಿತ್ರ ಕಲೆಗಳನ್ನು ವೀಕ್ಷಿಸಿದಾಗ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಕಲೆ ಎಂಬ ನೈಪುಣ್ಯತೆ ಎಲ್ಲರಲ್ಲಿಯೂ ಇರುವುದಿಲ್ಲ. ಇಂದಿನ ಸಮಾಜದಲ್ಲಿ ಬಾಹ್ಯ ಹಾಗೂ ಆಂತರಿಕವಾಗಿಯೂ ಒಳ್ಳೆಯ ಬಾವನೆಗಳನ್ನು ಉಂಟು ಮಾಡಿ ಪ್ರತಿಬಿಂಬಿಸುವುದೇ ಒಂದು ಉತ್ತಮ ಕಲೆಯಾಗಿರುತ್ತದೆ. ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಿಯಾಶೀಲರಾಗುವಂತೆ ಮಾಡಲು ಪೋಷಕರು ವಿಶೇಷ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ವಕೀಲ ಎಸ್.ಆರ್. ಜಗದೀಶ್ ಮಾತನಾಡಿ, ಮನುಷ್ಯರು ತಮ್ಮಲ್ಲಿರುವ ಉತ್ತಮ ಆಲೋಚನಾ ಶಕ್ತಿಯನ್ನು ಬಳಸಿಕೊಂಡು ನಿತ್ಯ ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಚಿತ್ರ ಕಲಾವಿದ ಬಿ.ಆರ್. ಸತೀಶ್ ಉದ್ಯಮಿ ರವೀಂದ್ರ, ವಕೀಲ ಕುಂಬೇರ ಅಯ್ಯಪ್ಪ ಹಾಗೂ ಚಿತ್ರ ಕಲಾವಿದ ಪಾಲೇಕಂಡ ಅಯ್ಯಪ್ಪ ಹಾಗೂ ಅವರ ಮಗಳು ಸುಚಿತ್ರ ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.