ಮಡಿಕೇರಿ, ಮಾ. 1: ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ನಗರದ ಸಂತಜೋಸೆಫರ ಶಾಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಭಾಗಿಯಾಗಿ ಶಿಕ್ಷಕರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಒಂದನೇ ತರಗತಿಯಿಂದಲೇ ಮಕ್ಕಳಿಗೆ ಭಾಷಾ ಶಿಕ್ಷಣವನ್ನು ನೀಡುವ ಬಗ್ಗೆ ಶಿಕ್ಷಕರಿಂದ ಬಂದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಾದ್ಯಂತ ಶಿಕ್ಷಕರ ಸಂವಾದದಲ್ಲಿ ಈ ಬಗ್ಗೆ ವಿಚಾರಗಳು ಪ್ರಸ್ತಾಪವಾಗಿವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬದಲಾವಣೆ ತರಬಹುದೆಂದು ಚಿಂತಿಸಲಾಗುವುದು ಎಂದರು.

7 ನೇ ತರಗತಿಗೆ ಎಸ್‍ಎಸ್‍ಎಲ್‍ಸಿ ಮಾದರಿಯ ಪರೀಕ್ಷೆ ನಡೆಸುವಂತೆ ಶಿಕ್ಷಕರು ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು ಶಿಕ್ಷಣ ಹಕ್ಕು ಕಾಯ್ದೆ ಮಕ್ಕಳಿಗೆ 7 ನೇ ತರಗತಿಗೆ ಈ ರೀತಿಯ ಪರೀಕ್ಷೆ ನಡೆಸಬಾರದು ಎಂಬ ನಿಯಮವಿದೆ. ಆದರೂ ಯಾವೊಬ್ಬ ವಿದ್ಯಾರ್ಥಿ ಅನುತ್ತೀರ್ಣ ಮಾಡದಂತೆ ತಿಳಿಸಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ರಾಜ್ಯಾದ್ಯಂತ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.ವಿಜ್ಞಾನ ವಿಷಯದಲ್ಲಿ ಹೆಚ್ಚು ಪ್ರಾಯೋಗಿಕ ತರಗತಿಗಳು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು, ಪ್ರಾಯೋಗಿಕ ತರಗತಿಗಳನ್ನು ಮತ್ತು ಕೊಠಡಿಗಳನ್ನು ಹೆಚ್ಚಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೆ ಇನ್ಫೋಸಿಸ್‍ನ ಸುಧಾ ಮೂರ್ತಿ ಅವರು ರಾಜ್ಯದ ಒಂದು ಸಾವಿರ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೂ ಇದರ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‍ನಲ್ಲಿಯೂ ಪ್ರಾಯೋಗಿಕ ತರಗತಿ ಮತ್ತು ಕೊಠಡಿಗಳನ್ನು ಆರಂಭಿಸಲು ಅನುದಾನ ಕೇಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗು ತ್ತದೆ, ಈ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಿನ ತರಗತಿಗಳನ್ನು ತೆಗೆದು ಕೊಳ್ಳಲಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿಗಳಿಗಿಂತ ಪುನರಾವರ್ತನೆಯೇ ಹೆಚ್ಚಾಗುತ್ತಿದೆ ಎಂದರು. ಜೊತೆಗೆ ಅನುದಾನಿತ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಶಾಲಾ ಶಿಕ್ಷಕರ ನಡುವೆ ಒಂದೇ ರೀತಿಯ ವೇತನ ಮತ್ತು ನಿಯಮ ರೂಪಿಸುವಂತೆ ಮತ್ತು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ನೇರವಾಗಿ ಕೇಳುವ ವ್ಯವಸ್ಥೆಯಿರಲಿ ಎಂದು ಶಿಕ್ಷಕರು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಈ ವಿಚಾರಗಳನ್ನು ಚರ್ಚಿಸಿ, ಒಂದೇ ರೀತಿಯ ನಿಯಮ ಗಳನ್ನು ತರಲು ಪ್ರಯತ್ನಿಸುವುದಾಗಿ ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯನ್ನು ಏರ್ಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಅವರ ಭೌದ್ಧಿಕ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಡಿ.ಡಿ.ಪಿ.ಐ ಮಚ್ಚಾಡೋ ಅವರು ಶಿಕ್ಷಕರಲ್ಲಿ ವಿನಂತಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ವಿವಿಧ ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು ಸೇರಿದಂತೆ ಇತರರು ಇದ್ದರು.