*ಸಿದ್ದಾಪುರ, ಮಾ.1 : ಸರ್ಕಾರಿ ಶಾಲೆಗಳ ಸುಧಾರಣೆಯ ಮಾತು, ಪೂರ್ವ ಪ್ರಾಥಮಿಕದಿಂದಲೇ ಎಲ್‍ಕೆಜಿ, ಯುಕೆಜಿಯ ಪ್ರಸ್ತಾಪ, ಕನ್ನಡ ಶಾಲೆಗಳ ಉಳಿವಿನ ಹೋರಾಟ ಹೀಗೆ ಬಡ ವಿದ್ಯಾರ್ಥಿಗಳ ಜ್ಞಾನ ದೇಗುಲವನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಆರಂಭಗೊಂಡಿರುವ ಈ ಹಂತದಲ್ಲೇ ರಾಜ್ಯದ ಅನೇಕ ಗ್ರಾಮೀಣ ಶಾಲೆಗಳ ಸದ್ದಡಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೂ ಏರಿದವರಿದ್ದಾರೆ, ಡಾಕ್ಟರ್, ಇಂಜಿನಿಯರ್‍ಗಳಾಗಿದ್ದಾರೆ, ಸೇನಾ ಮುಖ್ಯಸ್ಥರಾಗಿದ್ದಾರೆ, ಉತ್ತಮ ಶಿಕ್ಷಕರಾಗಿದ್ದಾರೆ. ಇಷ್ಟೆಲ್ಲಾ ಉದಾಹರಣೆಗಳಿದ್ದರೂ ಇಂದು ಸರ್ಕಾರಿ ಶಾಲೆಗಳನ್ನು ಕೇಳುವವರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ದೇಶದ ಪ್ರತಿಯೊಂದು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದರೊಂದಿಗೆ ಸುಣ್ಣ, ಬಣ್ಣದ ಭಾಗ್ಯವನ್ನು ಕೂಡ ಕಲ್ಪಿಸಲಾಗಿತ್ತು. ಅಷ್ಟರವರೆಗೆ ಯಾವುದೇ ಸೌಲಭ್ಯಗಳಿಲ್ಲದೆ ಕಳಾಹೀನಾ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗಳು ನಂತರದ ದಿನಗಳಲ್ಲಿ ಸುಧಾರಣೆಯನ್ನು ಕಂಡಿತು.

ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶುದ್ಧ ಕುಡಿಯುವ ನೀರು, ಸೈಕಲ್ ಮತ್ತಿತರ ಸೌಲಭ್ಯಗಳನ್ನು ನೀಡುವುದರೊಂದಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಅಲ್ಲದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಿ ಸಮಾನವಾದ ಅನುಕೂಲತೆಗಳನ್ನು ಮಾಡಿಕೊಡಲಾಗುತ್ತಿದೆ.

ಆದರೂ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಗ್ರಾಮೀಣ ಶಾಲೆಗಳನ್ನಂತು ಕೇಳುವವರೇ ಇಲ್ಲದಂತಾಗಿದೆ. ‘ವಿದ್ಯಾರ್ಥಿ ಒಬ್ಬನಿದ್ದರು ಗ್ರಾಮಕ್ಕೊಂದು ಶಾಲೆ ಇರಲೇಬೇಕು, ಕನ್ನಡದ ಸರ್ಕಾರಿ ಶಾಲೆಗಳು ಉಳಿಯಲೇಬೇಕು’ ಎನ್ನುವ ಗುರಿಯೊಂದಿಗೆ ಸರ್ಕಾರ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಆಸಕ್ತಿ ತೋರುತ್ತಿದೆ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಖಾಸಗಿ ಶಾಲೆಗಳ ಮೂಲಕವೇ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕೆಂದು ಎಲ್ಲಾ ವರ್ಗದ ಪೋಷಕರು ಹವಣಿಸುತ್ತಿರುವುದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೂ ಬೇಡಿಕೆ ಇಲ್ಲದಂತಾಗಿದೆ.

ಗ್ರಾಮೀಣ ಪ್ರದೇಶದ ಹಿರಿಯರು ಹಾಗೂ ದಾನಿಗಳು ಸ್ಥಳೀಯ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ನಿರ್ಮಿಸಲು ತಮ್ಮ ಸ್ವಂತ ಜಮೀನನ್ನು ದಾನ ಮಾಡಿದ ಅನೇಕ ಉದಾಹರಣೆಗಳಿವೆ. ಆದರೆ ಈ ಮಹಾದಾನ ಇಂದು ನಿಷ್ಪ್ರಯೋಜಕವಾಗಿ, ತಮ್ಮ ಕಣ್ಣೆದುರಿಗೇ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದನ್ನು ಕಂಡು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಇದೇ ರೀತಿಯ ದುಸ್ಥಿತಿ ಕೂಡ್ಲೂರು ಚೆಟ್ಟಳ್ಳಿ ಸರ್ಕಾರಿ ಶಾಲೆಗೂ ಬಂದಿದೆ. ವಿದ್ಯಾರ್ಥಿಗಳೇ ಇಲ್ಲದೆ ಮುಚ್ಚಲ್ಪಟ್ಟಿರುವ ಈ ಶಾಲೆಯನ್ನು ಭೂದಾನಿಗಳೇ ಕಾವಲು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡ್ಲೂರು ಚೆಟ್ಟಳ್ಳಿ ಸರ್ಕಾರಿ ಶಾಲೆ ಕಳೆದ ಅನೇಕ ವರ್ಷಗಳಿಂದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಆದರೆ ಇಂದು ಈ ಶಾಲೆ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಬೀಗ ಹಾಕಿಕೊಂಡಿದೆ.

ಸ್ಥಳೀಯ ದಾನಿ ಐಚೆಟ್ಟಿರ ಗಣಪತಿ ಗ್ರಾಮಕ್ಕೊಂದು ಶಾಲೆ ಬೇಕು ಎನ್ನುವ ಮಹಾ ಉದ್ದೇಶದಿಂದ ತಮ್ಮ ಸ್ವಂತ ಜಮೀನಿನಲ್ಲೆ ಎರಡು ಎಕರೆ ಪ್ರದೇಶವನ್ನು ಸರ್ಕಾರಿ ಶಾಲೆಗಾಗಿ ದಾನ ಮಾಡಿದ್ದರು. ಶಾಲೆಯೂ ನಿರ್ಮಾಣಗೊಂಡು ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯುತ್ತಿತ್ತು. ನಿರೀಕ್ಷಿತ ಸಂಖ್ಯೆಯಲ್ಲೇ ವಿದ್ಯಾರ್ಥಿಗಳೂ ವಿದ್ಯಾರ್ಜನೆ ಮಾಡುತ್ತಿದ್ದರು. ಆದರೆ ಕ್ರಮೇಣ ಆಂಗ್ಲ ಮಾಧ್ಯಮ ಶಾಲೆಗೆ ಮಾರುಹೋದ ಕಾರಣ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂತು ಕಾಡಾನೆಗಳ ಉಪಟಳದ ಆತಂಕವೂ ಆವರಿಸಿತ್ತು.

ಕಳೆದ ವರ್ಷ ವಿದ್ಯಾರ್ಥಿಗಳೇ ಇಲ್ಲದ ಶಾಲೆಯಲ್ಲಿ ಮೂವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ದಾಖಲೆಯಲ್ಲಿ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮತ್ತು ಅಡುಗೆ ಅನಿಲ ಸೇರಿದಂತೆ ಶಾಲೆಗೆ ಬರುತ್ತಿದ್ದ ಸರ್ಕಾರದ ಎಲ್ಲಾ ಸೌಲಭ್ಯಗಳು ದುರುಪಯೋಗವಾಗುತ್ತಿದ್ದ ಕುರಿತು ಪತ್ರಿಕೆ ವರದಿ ಮಾಡಿ ಗಮನ ಸೆಳೆದಿತ್ತು.

ನಂತರದ ದಿನಗಳಲ್ಲಿ ಇಬ್ಬರು ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಗೊಂಡರು. ಕರ್ತವ್ಯದಲ್ಲಿದ್ದ ಏಕೈಕ ಶಿಕ್ಷರೊಬ್ಬರು ಇತ್ತೀಚೆಗಷ್ಟೆ ನೆಲ್ಯಹುದಿಕೇರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಎಲ್‍ಕೆಜಿ, ಯುಕೆಜಿ ಗಳಿಂದ ನಗರ ಪ್ರದೇಶಗಳ ಸರ್ಕಾರಿ ಶಾಲೆಗಳು ಕೊಂಚ ಸುಧಾರಿಸಿಕೊಳ್ಳಬಹುದಷ್ಟೆ. ಆದರೆ ಗ್ರಾಮೀಣ ಶಾಲೆಗಳ ದುರ್ಗತಿಯ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಹಿರಿಯರು ಸದುದ್ದೇಶದಿಂದ ದಾನ ಮಾಡಿದ ಭೂಮಿಯಲ್ಲಿ ತಲೆ ಎತ್ತಿದ ಜ್ಞಾನ ದೇಗುಲಗಳು ಇಂದು ಬಾಗಿಲು ಮುಚ್ಚಿಕೊಳ್ಳುತ್ತಿರುವದು ದುರಂತವಷ್ಟೇ. - ಅಂಚೆಮನೆ ಸುಧಿ