ಸೋಮವಾರಪೇಟೆ, ಮಾ. 1: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ 2020ನೇ ಸಾಲಿನ ಜಾತ್ರೋತ್ಸವ ತಾ. 15 ರಿಂದ 17 ರವರೆಗೆ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ತಿಳಿಸಿದ್ದಾರೆ.

ತಾ. 15 ರಂದು ಬೆಳಿಗ್ಗೆ 4.30 ರಿಂದ ಗಣಪತಿ ಹೋಮ, ಶುದ್ಧೀಪುಣ್ಯ ನಡೆದು, 6.30ಕ್ಕೆ ಜಾತ್ರೋತ್ಸವದ ಧ್ವಜಾರೋಹಣ ನೆರವೇರಲಿದೆ. ಅಂದು ಸಂಜೆ 5.30ಕ್ಕೆ ನಾಗ ಸನ್ನಿಧಿಯಲ್ಲಿ ಕೊಳಪ್ಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀ ಕೃಷ್ಣಕುಮಾರ್‍ರವರ ಪೌರೋಹಿತ್ಯದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ನಡೆಯಲಿದೆ. 6 ಗಂಟೆಗೆ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ನೂತನ ಮುಖ ಮಂಟಪ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಲಿದ್ದಾರೆ. ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಡಿ. ವಿನೋದ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿಗಳಾದ ಬಿ.ಎಸ್. ಶ್ರೀಧರ್ ಅವರುಗಳು ಪಾಲ್ಗೊಳ್ಳಲಿದ್ದಾರೆ. ತಾ. 16 ರಂದು ಮಧ್ಯಾಹ್ನ 12.30ಕ್ಕೆ ಜಾತ್ರೋತ್ಸವ ಕಾರ್ಯಗಳು ಆರಂಭವಾಗಲಿದ್ದು, 1.30ಕ್ಕೆ ಕಲಶ ಪೂಜೆ ನಡೆದು, ಅಪರಾಹ್ನ 3.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ಸಂಜೆ 4.30ಕ್ಕೆ ಕೇರಳದ ಸಿಂಗಾರಿ ಮೇಳದೊಂದಿಗೆ ದೇವಸ್ಥಾನದಿಂದ ಹೊರಡುವ ಕಳಶದ ಮೆರವಣಿಗೆಯು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ಸಂಜೆ 6.30ಕ್ಕೆ ವಿಷ್ಣುಮೂರ್ತಿ, 7ಕ್ಕೆ ಕರಿಂಗುಟ್ಟಿ ಶಾಸ್ತಾವ್, 7.30ಕ್ಕೆ ಕಂಡಕರ್ಣ, ರಾತ್ರಿ 8.30ಕ್ಕೆ ಭಗವತಿದೇವಿ, 9.30ಕ್ಕೆ ರಕ್ತಚಾಮುಂಡಿ, 10.30ಕ್ಕೆ ಪೊಟ್ಟನ್ ದೈವಗಳ ವೆಳ್ಳಾಟಂ, ರಾತ್ರಿ 11.30ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ. ಸೋಮವಾರ ರಾತ್ರಿ 7.30ರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ನಂತರ ಪಟಾಕಿ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ. ತಾ. 17 ರಂದು ಬೆಳಗ್ಗಿನ ಜಾವ 1 ಗಂಟೆಗೆ ಭಗವತಿದೇವಿ, 2ಕ್ಕೆ ಕಂಡಕರ್ಣ, 3ಕ್ಕೆ ಪೊಟ್ಟನ್, 4ಕ್ಕೆ ಕರಿಂಗುಟ್ಟಿ ಶಾಸ್ತಾವ್, 5ಕ್ಕೆ ಮುತ್ತಪ್ಪ ಹಾಗೂ ತಿರುವಪ್ಪ ದೈವಗಳ ಕೋಲಗಳು ನಡೆಯಲಿವೆ. ಬೆಳಿಗ್ಗೆ 7 ಗಂಟೆಗೆ ರಕ್ತಚಾಮುಂಡಿ, 9ಕ್ಕೆ ವಿಷ್ಣುಮೂರ್ತಿ ದೈವಗಳ ಕೋಲಗಳು ನಡೆದು, 10 ಗಂಟೆಗೆ ಕಂಡಕರ್ಣ ದೈವದ ಗುರುಶ್ರೀದರ್ಪಣ, ಮಧ್ಯಾಹ್ನ 12ಗಂಟೆಗೆ ಗುಳಿಗಾ ದೈವದ ಕೋಲ ನಡೆದು, ಅಪರಾಹ್ನ 3 ಗಂಟೆಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.