ಶ್ರೀಮಂಗಲ, ಮಾ. 1: ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಬಯವಂಡ ಪ್ರತು ಪೂವಣ್ಣ ಮತ್ತು ದೀಪ್ತಿ ದಂಪತಿಯ 2 ತಿಂಗಳ ಹೆಣ್ಣು ಮಗು ಶನಿವಾರ ರಾತ್ರಿ ಮೃತಪಟ್ಟಿದೆ.

ಭಾನುವಾರ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿತ್ತು. ಫೆಬ್ರವರಿ 27 ರಂದು ಡಿ..ಪಿ.ಟಿ 2 ನೇ ಹಂತದ ವ್ಯಾಕ್ಷಿನ್ ಅನ್ನು ಮಗುವಿನ ತಾಯಿಯ ಮನೆ ಸಮೀಪದ ಕಾಕೋಟುಪರಂಬು ಸರಕಾರಿ ಆಸ್ಪತ್ರೆಯಲ್ಲಿ ಹಾಕಿಸಲಾಗಿತ್ತು. ತೀವ್ರ ಜ್ವರದಿಂದ ಮಗು ಬಳಲುತಿತ್ತು, ಈ ಹಿನ್ನೆಲೆ ಶನಿವಾರ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶನಿವಾರ ರಾತ್ರಿ ಮೃತಪಟ್ಟಿದೆ.

ಹೈಸೊಡ್ಲೂರು ಗ್ರಾಮದಲ್ಲಿ ಭಾನುವಾರ ಮಗುವಿನ ಅಂತ್ಯಕ್ರಿಯೆ ಮಾಡಲಾಯಿತು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಗು ಕಳೆದುಕೊಂಡ ಕುಟುಂಬ ಮತ್ತು ಬಂಧುಗಳ ರೋಧನ ಅಂತ್ಯಕ್ರಿಯೆಗೆ ಬಂದಿದ್ದ ಪ್ರತಿಯೊಬ್ಬರ ಕರುಳು ಹಿಂಡುವಂತಿತ್ತು.