ಮಡಿಕೇರಿ, ಮಾ. 1: ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ (ಪಿಪಿವಿ ಮತ್ತು ಎಫ್‍ಆರ್‍ಎ) ಬಗ್ಗೆ ರೈತರಿಗೆ ಅರಿವು ಮೂಡಿಸುವ ಸಲುವಾಗಿ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಟಿ.ಹೆಚ್. ಗೌಡ, ಉಪ ನೋಂದಣಾಧಿಕಾರಿ, ಪಿಪಿವಿ ಮತ್ತು ಎಫ್‍ಆರ್‍ಎ (ಶಾಖಾ ಕಚೇರಿ-ಶಿವಮೊಗ್ಗ), ಯುಎಹೆಚ್‍ಎಸ್, ಶಿವಮೊಗ್ಗ ಇವರು ನೆರವೇರಿಸಿದರು. ಪಿಪಿವಿ ಮತ್ತು ಎಫ್‍ಆರ್‍ಎ ಕಾಯ್ದೆಯ ಬಗ್ಗೆ ಸಿದ್ಧಪಡಿಸಿದ್ದ ವಿಸ್ತರಣೆ ಕೈಪಿಡಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಡಾ. ಕೆ.ವಿ. ಸಜಿ, ಪ್ರಧಾನ ವಿಜ್ಞಾನಿ ಮತ್ತು ನೋಡಲ್ ಆಫೀಸರ್, ಐ.ಸಿ.ಎ.ಆರ್-ಐ.ಐ.ಎಸ್.ಆರ್, ಕೋಜಿಕೋಡು, ಇವರು ಕಾರ್ಯಕ್ರಮದ ಮೂಲ ಉದ್ದೇಶವನ್ನು ತಿಳಿಸಿದರು. ಹಾಗೆಯೇ ಪಿಪಿವಿ ಮತ್ತು ಎಫ್‍ಆರ್‍ಎ ಕಾಯ್ದೆಯಡಿಯಲ್ಲಿ ನೋಂದಾಯಿಸಲಾಗಿರುವ ಸಂಬಾರ ಬೆಳೆಗಳ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಟಿ.ಹೆಚ್. ಗೌಡ ಪಿಪಿವಿ ಮತ್ತು ಎಫ್‍ಆರ್ ಕಾಯ್ದೆ 2001 ರ ಅಡಿಯಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಡಾ. ಶಿವಕುಮಾರ್, ವಿಜ್ಞಾನಿ, ಐ.ಸಿ.ಎ.ಆರ್-ಐ.ಐ.ಎಸ್.ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಇವರು ಕಾಳುಮೆಣಸು ಮತ್ತು ಇತರ ಸಂಬಾರ ಬೆಳೆಗಳ ನೋಂದಣಿಗೆ ಅಗತ್ಯವಿರುವ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಎಸ್.ಜೆ. ಅಂಕೇಗೌಡ, ಮುಖ್ಯಸ್ಥರು, ಐ.ಸಿ.ಎ.ಆರ್-ಐ.ಐ.ಎಸ್.ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಇವರು ಐ.ಸಿ.ಎ.ಆರ್-ಐ.ಐ.ಎಸ್.ಆರ್ ಅಭಿವೃದ್ಧಿಪಡಿಸಿರುವ ತಂತ್ರÀಜ್ಞಾನಗಳ ಬಗ್ಗೆ ವಿವರಣೆ ನೀಡಿದರು. ಪಿಪಿವಿ ಮತ್ತು ಎಫ್‍ಆರ್‍ಎ ಕಾಯ್ದೆಯ ಅಡಿಯಲ್ಲಿ ತಳಿಯನ್ನು ನೋಂದಾಯಿಸಲು ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ತಮ್ಮ ಅನುಭವವನ್ನು ರಮಕಾಂತ್ ಹೆಗಡೆ, ಪ್ರಗತಿಪರ ರೈತರು, ಉತ್ತರ ಕನ್ನಡ ಇವರು ಹಂಚಿಕೊಂಡರು.

ನಂತರ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾಳುಮೆಣಸು, ಏಲಕ್ಕಿ, ಶುಂಠಿ ಮತ್ತು ಅರಿಶಿಣ ತಳಿಗಳ ವೈವಿಧ್ಯತೆಯನ್ನು ಪ್ರದರ್ಶಿಸುವ ಹಾಗೂ ಐ.ಐ.ಎಸ್.ಆರ್. ಅಭಿವೃದ್ಧಿಪಡಿಸಿರುವ ತಂತ್ರÀಜ್ಞಾನಗಳ ಮಾಹಿತಿಯನ್ನೊಳಗೊಂಡ ಪ್ರದರ್ಶನ ಮಳಿಗೆಯನ್ನು ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿತ್ತು. ರೈತರು ತಮ್ಮಲ್ಲಿ ಬೆಳೆದ ಸಂಬಾರ ಬೆಳೆಗಳ ವಿವಿಧ ತಳಿಗಳನ್ನು ಸಹ ಪ್ರದರ್ಶನಕ್ಕೆ ಇಟ್ಟಿದ್ದರು. ರೈತರನ್ನು ಉತ್ತೇಜಿಸಲು ಅತ್ಯುತ್ತಮ ಪ್ರದರ್ಶನ ಮಳಿಗೆಗೆ ಬಹುಮಾನವನ್ನು ವಿತರಿಸಲಾಯಿತು. ಮಡಿಕೇರಿಯ ಎಫ್‍ಎಂಸಿ ಕಾಲೇಜಿನ ವಿದ್ಯಾರ್ಥಿಗಳು, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಕರ್ನಾಟಕದ ವಿವಿಧ ಭಾಗದÀ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.