ಮಡಿಕೇರಿ, ಮಾ. 1: ಮುಂದಿನ 2021 ಜನಗಣತಿ ಸಂಬಂಧ ಮನೆಪಟ್ಟಿ ಸಮೀಕ್ಷೆ ಕೈಗೊಳ್ಳುವ ಬಗ್ಗೆ ತರಬೇತಿ ಕಾರ್ಯಾಗಾರವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಜನಗಣತಿ ಅಧಿಕಾರಿಗಳು, ತಾಲೂಕು ಮಟ್ಟದ ಚಾರ್ಜ್ ಅಧಿಕಾರಿಗಳು, ತಹಶೀಲ್ದಾರರು, ಪೌರಾಯುಕ್ತರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ತಾಲೂಕು ಕಚೇರಿ ಕಂದಾಯ ನಿರೀಕ್ಷಕರು, ಇತರರಿಗೆ ತರಬೇತಿ ನೀಡಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಜನಗಣತಿ ನಿರ್ದೇಶನಾಲಯದ ಅಧಿಕಾರಿ ಹಾಗೂ ಜಿಲ್ಲಾ ನೋಡೆಲ್ ಅಧಿಕಾರಿ ಚಂದ್ರಶೇಖರ್ ಜನಗಣತಿ ಸಂಬಂಧಿಸಿದಂತೆ ನಕಾಶೆ ತಯಾರಿಸುವುದು, ಮನೆ ಪಟ್ಟಿ ಸಮೀಕ್ಷೆ ನಡೆಸುವುದು, ಗಣತಿದಾರರ ಮೇಲ್ವಿಚಾರಕರ ನೇಮಕ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕÀ ಪಿ.ಎಸ್.ಮಚ್ಚಾಡೋ, ಪೌರಾಯುಕ್ತ ರಮೇಶ್, ತಹಶೀಲ್ದಾರ್ ಗೋವಿಂದರಾಜು, ಮಹೇಶ್, ಪ್ರವೀಣ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀಧರ್, ಸಂಜೀವ್ ಕುಮಾರ್ ಇತರರು ಪಾಲ್ಗೊಂಡಿದ್ದರು.