ಮಡಿಕೇರಿ, ಮಾ. 1: ಇಲ್ಲಿನ ಕೋಟೆ ಆವರಣದಲ್ಲಿರುವ ಗ್ರಂಥಾಲಯವನ್ನು ತೆರವುಗೊಳಿಸುವಂತೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಆದೇಶವಾಗಿರುವ ಮೇರೆಗೆ ಪ್ರಸ್ತುತ ನಗರದ ಕೈಗಾರಿಕಾ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿದೆ. ಬಡಾವಣೆಯ ಸರಕಾರಿ ಮುದ್ರಣಾಲಯಕ್ಕೆ ಹೊಂದಿಕೊಂಡಿ ರುವ ಹಳೆಯ ಕಟ್ಟಡವನ್ನು ಈ ಸಂಬಂಧ ನವೀಕರಣ ಮಾಡಲಾಗುತ್ತಿದೆ.ಕೊಡಗು ಗ್ರಂಥಾಲಯ ಇಲಾಖೆ ಯಿಂದ ಜಿಲ್ಲಾಡಳಿತದ ನಿರ್ದೇಶನ ದಂತೆ ಸರಕಾರಿ ಮುದ್ರಣಾಲಯಕ್ಕೆ ಸಂಬಂಧಿಸಿದಂತೆ ಈ ಕಟ್ಟಡವನ್ನು ಕೊಡಗು ನಿರ್ಮಿತಿ ಕೇಂದ್ರದಿಂದ ರೂ. 80 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ.ಸರಕಾರಿ ಮುದ್ರಣಾಲಯದ ಈ ಹಳೆಯ ಕಟ್ಟಡದ ಗೋಡೆಗಳನ್ನು ಉಳಿಸಿಕೊಂಡು, ಕಟ್ಟಡದ ಮೇಲ್ಛಾವಣಿಯೂ ಸೇರಿದಂತೆ ಭವಿಷ್ಯದ ಗ್ರಂಥಾಲಯಕ್ಕೆ ಪೂರಕವಾಗಿ ಅದನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೈಗಾರಿಕಾ ಬಡಾವಣೆಯಲ್ಲಿ ಈ ಕಟ್ಟಡಕ್ಕೆ ಪ್ರತ್ಯೇಕ ದ್ವಾರ ಸಹಿತ ಆವರಣ ಗೋಡೆ, ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಕೊಡಗಿನ ಮಳೆಗಾಲವನ್ನು ಗಮನದಲ್ಲಿ ಇರಿಸಿಕೊಂಡು ಮುಂಗಾರುವಿನಲ್ಲಿ ಕಟ್ಟಡದ ಗೋಟೆಗಳು ನೀರಿನ ಅಂಶದಿಂದ ತೇವಗೊಳ್ಳದಂತೆ ಗ್ರಾನೈಟ್‍ಗಳಿಂದ ಹಳೆಯ ಗೋಡೆಗಳಿಗೆ ರಕ್ಷಾ ಕವಚ ಸಹಿತ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದೆ.
ಇದರೊಂದಿಗೆ ಒಳಾಂಗಣದಲ್ಲಿ ಗ್ರಂಥಗಳ ಜೋಡಣೆಗೆ ಪೂರಕ ವ್ಯವಸ್ಥೆ ಹಾಗೂ ಬೆಳಕಿನ ಅನುಕೂಲ ಸಹಿತ ಆಧುನಿಕ (ಹೈಟೆಕ್) ಗ್ರಂಥಾಲಯವಾಗಿ ವಿನ್ಯಾಸಗೊಳಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾತ್ರವಲ್ಲದೆ ಜಿಲ್ಲಾ ಗ್ರಂಥಾಲಯ ಕಟ್ಟಡಕ್ಕೆ ಅಗತ್ಯವಿರುವಷ್ಟು ಜಾಗ ವಿಸ್ತೀರ್ಣವಿಲ್ಲದ ಹಿನ್ನೆಲೆ ಇರುವ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ಅಟ್ಟಣಿಗೆ ಕಲ್ಪಿಸಿ ಹಳೆಯ ಗ್ರಂಥಗಳ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದು, ಮಳೆಗಾಲದಲ್ಲಿ ಪುಸ್ತಕಗಳು ಹಾಳಾಗದಂತೆ ಹೆಚ್ಚು ಸಾಮಥ್ರ್ಯದ ವಿದ್ಯುತ್ ದೀಪಗಳನ್ನು ಜೋಡಣೆ ಮಾಡಲು ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲಾ ಕೇಂದ್ರದ ಕೋಟೆ ಆವರಣದಲ್ಲಿರುವ ಐತಿಹಾಸಿಕ ಗ್ರಂಥಾಲಯವು ಭವಿಷ್ಯದಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ನಗರದ ಕೈಗಾರಿಕಾ ಬಡಾವಣೆಯತ್ತ ಸ್ಥಳಾಂತಗೊಳ್ಳಲು ಭರದ ತಯಾರಿ ನಡೆಯುತ್ತಿದೆ.