ಕುಶಾಲನಗರ, ಮಾ. 1: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು ರಿಯಲ್ ಎಸ್ಟೇಟ್ ದಂಧೆಗಳು ಕರಾಳ ಹಸ್ತ ಚಾಚುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಪಂಚಾಯ್ತಿ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿಯಿಲ್ಲದೆ ಎಲ್ಲೆಂದರಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರುವ ದೃಶ್ಯಗಳು ಕಾಣಬಹುದು. ಪಟ್ಟಣದ ಸಾಯಿ ಬಡಾವಣೆ ಸಮೀಪದಲ್ಲಿ ಕಾವೇರಿ ನದಿ ತಟದಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು ಯಾವುದೇ ರೀತಿಯ ಪರವಾನಗಿ ಪಡೆಯದಿರುವುದು ಬೆಳಕಿಗೆ ಬಂದಿದೆ. ಖಾಸಗಿ ಜಮೀನಿನ ನದಿ ದಂಡೆಯಲ್ಲಿ ಕಬ್ಬಿಣಗಳ ದಿಮ್ಮಿಗಳನ್ನು ಬಳಸಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿರುವುದು ಗೋಚರಿಸಿದೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯ್ತಿ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಕೆಲಸ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾಲೂಕು ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಸರಕಾರಿ ಇಲಾಖೆಯೊಂದರಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬರು ಈ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿದ್ದು ನದಿ ದಂಡೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಬಸಪ್ಪ ಬಡಾವಣೆ ಮತ್ತು ಸಾಯಿ ಬಡಾವಣೆ ನಡುವೆ ರಾಜಕಾಲುವೆಯನ್ನು ಸ್ಥಳೀಯ ನಿವಾಸಿಯೊಬ್ಬ ಒತ್ತುವರಿ ಮಾಡಲು ಯತ್ನಿಸಿದ್ದು ಕಾಲುವೆಯಲ್ಲಿ ಸಿಮೆಂಟ್ ಸ್ಲ್ಯಾಬ್‍ಗಳನ್ನು ಅಳವಡಿಸುತ್ತಿರುವ ಅಕ್ರಮ ನಿರ್ಮಾಣದ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಅಕ್ರಮ ಕಾಮಗಾರಿ ತಕ್ಷಣ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ನದಿ ತಟಗಳಲ್ಲಿರುವ ಪ್ರದೇಶಗಳ ಭೂ ಪರಿವರ್ತನೆ ಮಾಡಲು ಅನುಮತಿ ಇಲ್ಲದಿದ್ದರೂ ಕುಶಾಲನಗರ ವ್ಯಾಪ್ತಿಯ ನದಿ ಕೆರೆ ದಂಡೆಗಳಲ್ಲಿ ಅಕ್ರಮ ಕಾಮಗಾರಿಗಳು ತಲೆ ಎತ್ತುತ್ತಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು ಅಂತಹವರ ಮೇಲೆ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.