ಸೋಮವಾರಪೇಟೆ,ಮಾ.1: ಸರ್ಕಾರದ ವಿವಿಧ ಯೋಜನೆಗಳಡಿ ನಡೆಯುವ ಕಾಮಗಾರಿಗಳು ಕಳಪೆಯಾದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವದು. ಯಾವದೇ ಕಾರಣಕ್ಕೂ ಕಳಪೆ ಕಾಮಗಾರಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದರು.

ಶಾಂತಳ್ಳಿ ಹೋಬಳಿಯ ಕೊತ್ತನಳ್ಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದ್ದ ರೂ. 70 ಲಕ್ಷ ವೆಚ್ಚದ ಡಾಂಬರು ರಸ್ತೆ ಕಳಪೆಯಾಗಿದ್ದು, ಕಾಮಗಾರಿ ಮುಗಿದ ಎರಡು ದಿನದಲ್ಲೇ ಕಿತ್ತುಬಂದ ಹಿನ್ನೆಲೆ, ಭಾನುವಾರ ಮರುಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿ ಕಳಪೆಯಾದರೆ ಸಂಬಂಧಿಸಿದ ಅಭಿಯಂತರರನ್ನೇ ನೇರ ಹೊಣೆಯನ್ನಾಗಿಸಿ ಅಮಾನತು ಮಾಡಲಾಗುವದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ಒಂದು ವಾರದ ಹಿಂದೆ ಕೈಗೊಂಡಿರುವ ರಸ್ತೆ ಕಾಮಗಾರಿ ತೀವ್ರ ಕಳಪೆಯಾಗಿದ್ದು, ತಕ್ಷಣ ಸಂಪೂರ್ಣ ಡಾಂಬರನ್ನು ತೆಗೆದು ನೂತನವಾಗಿ ಮರುಡಾಂಬರೀಕರಣ ಮಾಡಬೇಕು. ಯಾವ ಪಕ್ಷದ ಬೆಂಬಲಿಗರಾದರೂ ಸರಿಯೇ ಕಾಮಗಾರಿ ಕಳಪೆಯಾದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಿಯಮದಂತೆ ಕಾಮಗಾರಿ ನಿರ್ವಹಿಸಬೇಕು. ಕೆಲಸದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಉಡಾಫೆಯಿಂದ ವರ್ತಿಸಿದರೆ ಸಹಿಸುವದಿಲ್ಲ ಎಂದು ಶಾಸಕರು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ನಾಡ್ನಳ್ಳಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯೂ ಕಳಪೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರರು ಉಡಾಫೆಯ ವರ್ತನೆ ತೋರುತ್ತಾರೆ ಎಂದು ಸ್ಥಳದಲ್ಲಿದ್ದ ಬಗ್ಗನ ಅನಿಲ್ ಕುಮಾರ್ ಆರೋಪಿಸಿದರು. ಈ ಬಗ್ಗೆ ಗಮನ ಹರಿಸುವಂತೆ ಅಭಿಯಂತರರಿಗೆ ಸೂಚನೆ ನೀಡಲಾಯಿತು.

ಗ್ರಾಮೀಣ ಪ್ರದೇಶಗಳಿಗೆ ಅನುದಾನ ಲಭಿಸುವದೇ ಕಷ್ಟ. ಈ ಮಧ್ಯೆ ಕೊತ್ನಳ್ಳಿ ಕಾಮಗಾರಿಯನ್ನು ಕಳಪೆ ಮಾಡಿದರೆ ಹೇಗೆ? 10 ವರ್ಷ ಬಾಳಿಕೆ ಬರುವ ರಸ್ತೆ ಎರಡು ದಿನದಲ್ಲೇ ಕಿತ್ತುಬಂದಿದೆ. ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದ ರಂಜನ್, ತಕ್ಷಣ ಸಂಪೂರ್ಣವಾಗಿ ರಸ್ತೆಗೆ ಹೊಸದಾಗಿ ಡಾಂಬರು ಹಾಕಬೇಕು ಎಂದು ಸೂಚಿಸಿದರು. ಕೊತ್ನಳ್ಳಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯರು, ಲೋಕೋಪಯೋಗಿ ಇಲಾಖಾ ಅಭಿಯಂತರ ಹಾಗೂ ಗುತ್ತಿಗೆದಾರರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಇದೇ ಸಂದರ್ಭ ಕಳಪೆ ಕಾಮಗಾರಿ ಆಗಿರುವ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ನೂತನವಾಗಿ ಡಾಂಬರು ಹಾಕುವ ಕಾಮಗಾರಿಗೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಚಾಲನೆ ನೀಡಿದರು. ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಸ್ಥಳೀಯರಾದ ಅರುಣ್‍ಕೊತ್ನಳ್ಳಿ, ರಾಜೇಶ್, ಸುರೇಶ್, ಡಿ.ಜೆ. ಸುನಿಲ್, ಧನಂಜಯ ಸೇರಿದಂತೆ ಇತರರು ಉಪಸ್ಥಿತರಿದ್ದರು.