ವೀರಾಜಪೇಟೆ, ಮಾ.1 : ಕೆದಮುಳ್ಳೂರು ಗಾ.ಪಂ. ವ್ಯಾಪ್ತಿಯ ಬಾರಿಕಾಡು ಪೈಸಾರಿಯ ಏಳು ಎಕರೆ ಜಾಗದಲ್ಲಿ 129ಮಂದಿ ನಿರಾಶ್ರಿತ ಫಲಾನುಭವಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮನೆಗಳನ್ನು ನಿಗದಿತ ಅವಧಿಯಲ್ಲಿ ವಿತರಿಸಲಾಗು ವುದು. ಸ್ಥಳೀಯ ನಿರಾಶ್ರಿತರಿಗೂ ಮನೆ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಬಳಿಯ ಕೆದಮುಳ್ಳೂರು ಬಾರಿಕಾಡು ಪೈಸಾರಿಯಲ್ಲಿ ನಿರಾಶ್ರಿತರ ಮನೆಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ಬೋಪಯ್ಯ ಅವರು ಈಗ ಬಾರಿಕಾಡು ಪೈಸಾರಿಯಲ್ಲಿ ಸುಮಾರು ರೂ. 5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ 78ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಹಸ್ತಾಂತರಿಸಲಾಗುವುದು.

ಎಲ್ಲರಿಗೂ ಸ್ವಂತ ನೆಲೆಗಟ್ಟಿನಲ್ಲಿ ಶಾಶ್ವತವಾಗಿ ಸೂರು ಒದಗಿಸಬೇಕೆನ್ನು ವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಉದ್ದೇಶವಾಗಿದೆ ಎಂದರು.

ಅತಿಥಿಗಳಾಗಿ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕ ರಘು ನಾಣಯ್ಯ, ಚೋಟು ಬಿದ್ದಪ್ಪ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ಅನಿತಾ ಸದಸ್ಯರುಗಳಾದ ಇಸ್ಮಾಯಿಲ್, ಕಿರಣ್, ಚುಕ್ಕು ದೇವಯ್ಯ, ಎನ್.ಯು. ತೇಜ, ಅರುಣ್, ಎಂ.ಎಂ. ಪರಮೇಶ್ವರ್, ಗ್ರಾಮದ ಪ್ರಮುಖರಾದ ಮಾಳೇಟಿರ ಕಾವೇರಪ್ಪ, ಪ್ರವೀಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಗುತ್ತಿಗೆದಾರರಾದ ಪಿ.ರಾಜಪ್ಪ. ಐ.ಟಿ.ಡಿ.ಪಿ. ಅಧಿಕಾರಿ ಪ್ರಮೋದ್, ಜಿ.ಪಂ. ಸಹಾಯಕ ಅಭಿಯಂತರ ಮಹದೇವ್, ಮಡಿಕೇರಿಯ ಕೆ.ಆರ್.ಐ.ಡಿ.ಎಲ್‍ನ ಸಹಾಯಕ ಅಭಿಯಂತರ ಪ್ರಮೋದ್ ಉಪಸ್ಥಿತರಿದ್ದರು.