ಗೋಣಿಕೊಪ್ಪ ವರದಿ, ಮಾ. 1: ಕಿರುಗೂರು ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾಫಿ ಗಿಡ ಹಾಗೂ ಕಾಳು ಮೆಣಸು ಬಳ್ಳಿ ಬೆಂದು ಹೋಗಿದೆ. ಶನಿವಾರ ತಡ ರಾತ್ರಿ ಘಟನೆ ನಡೆದಿದೆ.
ಗ್ರಾಮದ ಸಣ್ಣ ಬೆಳೆಗಾರರಾಗಿರುವ ಕಾಕೇರ ಧನು ಎಂಬವರಿಗೆ ಸೇರಿದ ತೋಟವಾಗಿದ್ದು, ಬೆಂಕಿಯಿಂದ ಸುಮಾರು 10 ಕಾಫಿ ಗಿಡ, 5 ಕ್ಕೂ ಹೆಚ್ಚು ಕಾಳುಮೆಣಸು ಬಳ್ಳಿ ಬೆಂದು ಹೋಗಿವೆ. ಅದೃಷ್ಠವಶಾತ್ ಮುಂಜಾನೆ ಬಿದ್ದ ಮಳೆಯಿಂದಾಗಿ ನಷ್ಟದ ಪ್ರಮಾಣ ತಗ್ಗಿದೆ.
ಸಾಮಾನ್ಯವಾಗಿ ನಿತ್ಯ ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಬೆಳೆಗಾರ ಧನು ಭಾನುವಾರ ತೋಟಕ್ಕೆ ತೆರಳಿರಲಿಲ್ಲ. ಇದರಿಂದ ಜೀವಾಪಾಯದಿಂದ ಪಾರಾದಂತಾಗಿದೆ. ತೋಟದಲ್ಲಿ ತಂತಿ ತುಂಡಾಗಿ ಬಿದ್ದು ವಿದ್ಯುತ್ ಹರಿದಾಡುತಿತ್ತು. ಮಳೆ ಕೂಡ ಬಿದ್ದ ಕಾರಣ ಹೆಚ್ಚು ತೊಂದರೆಯಾಗುತಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿದರು.