ಮಡಿಕೇರಿ, ಫೆ. 29: ನೆಲ್ಲಿಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೂರಾರು ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ಬಾಡಿಗೆ ಮನೆ ಮತ್ತು ನದಿದಡವನ್ನೇ ಆಶ್ರಯಿಸಿದ್ದಾರೆ. ಆದರೆ ಇಲ್ಲಿಯವರೆಗೆ ನಿವೇಶನ ನೀಡುವ ಕಾಳಜಿಯನ್ನು ಆಡಳಿತ ವ್ಯವಸ್ಥೆ ತೋರದೆ ಇರುವುದರಿಂದ ಮಾ. 2 ರಂದು ನೆಲ್ಲಿಹುದಿಕೇರಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐಎಂ ಕಾರ್ಯದರ್ಶಿ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ನೂರಾರು ಗಿರಿಜನ ಕುಟುಂಬಗಳು ನದಿ ದಡದಲ್ಲಿ ಬದುಕು ನಡೆಸುತ್ತಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಆದಿವಾಸಿಗಳಿಗೆ ಮೀಸಲಿಟ್ಟ ಸುಮಾರು 4.5 ಏಕರೆ ಜಾಗವನ್ನು ಕೆಲವು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಉಚ್ಛನ್ಯಾಯಾಲಯ ಆದಿವಾಸಿಗಳಿಗೆ ಭೂಮಿ ನೀಡಬೇಕೆಂದು ಆದೇಶ ನೀಡಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.

ಆದಿವಾಸಿಗಳಿಗೆ ಭೂಮಿ ನೀಡಬೇಕೆಂದು ಒತ್ತಾಯಿಸಿ ಮಾ.2 ರಂದು ಬೆಳಿಗ್ಗೆ 11.30ಕ್ಕೆ ನೆಲ್ಲಿಹುದಿಕೇರಿ ಗ್ರಾ.ಪಂ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದ್ದಾರೆ.