ಕುಶಾಲನಗರ, ಫೆ. 29: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಕುಶಾಲನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಬಾರಿ ಪ್ರವಾಹದ ನೀರಿನ ಸೆಳೆತದಿಂದಾಗಿ ನೆಲಕಚ್ಚಿದ್ದ ನಿಲ್ದಾಣದ ತಡೆಗೋಡೆಯ ನಿರ್ಮಾಣ ಕಾಮಗಾರಿ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣದ ನೂತನ ಕಟ್ಟಡ ಕಾಮಗಾರಿಯನ್ನು ಅವರು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಕಳೆದ ಬಾರಿಯ ನೆರೆಹಾವಳಿಯ ಸಂದರ್ಭ ಸರ್ಕಾರಿ ಬಸ್ ನಿಲ್ದಾಣದ ಆವರಣದ ತಡೆಗೋಡೆ ನೆಲಕಚ್ಚಿತ್ತು. ಇದೀಗ ಅದರ ದುರಸ್ತಿಗಾಗಿ ಸರ್ಕಾರದಿಂದ 70 ಲಕ್ಷ ರೂ. ಮಂಜೂರಾಗಿದೆ. ಅದೇ ರೀತಿ ಕುಶಾಲನಗರ ಪಟ್ಟಣ ಪಂಚಾಯಿತಿಯ ನೂತನ ಕಚೇರಿಗೆ ಕಟ್ಟಡ ಕಾಮಗಾರಿಗೆ ಸರ್ಕಾರದ ವತಿಯಿಂದ 5 ಕೋಟಿ ರೂ. ಮಂಜೂರಾಗಿದ್ದು ಎರಡು ಕಾಮಗಾರಿಗಳನ್ನು ಆದಷ್ಟು ಶೀಘ್ರವೇ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯ ಅಮೃತ್‍ರಾಜ್ ಜಯವರ್ಧನ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಬಿಜೆಪಿ ಪ್ರಮುಖರಾದ ವಿ.ಎನ್.ವಸಂತ್‍ಕುಮಾರ್, ಕೆ.ಜಿ.ಮನು, ಎಂ.ಡಿ ಕೃಷ್ಣಪ್ಪ, ಶಿವಾಜಿ, ಎಂ.ಎಂ ಚರಣ್, ಪುಂಡರೀಕಾಕ್ಷ, ಭಾಸ್ಕರ್‍ನಾಯಕ್, ಶಿವಣ್ಣ, ವೈಶಾಕ್, ಸಂಚಾರಿ ನಿಯಂತ್ರಕ ಶ್ಯಾಂಶೆಟ್ಟಿ ಮತ್ತಿತರರು ಇದ್ದರು.