ಪೊನ್ನಂಪೇಟೆ, ಫೆ. 26 : ಕಳೆದ ಶನಿವಾರ ಬೆಳಿಗ್ಗೆ ಸಮೀಪದ ಹಾತೂರು ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ದಾಂಧಲೆ ನಡೆಸಿದರು ಎನ್ನಲಾದ ನಾಲ್ವರ ಪೈಕಿ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಗೋಣಿಕೊಪ್ಪಲು ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಮಂಗಳೂರು ಸಮೀಪದ ಉಲ್ಲಾಳದ ಅಂಗಾರಗುಂಡಿ ನಿವಾಸಿ ಜಾಫರ್ ಸಾದಿಕ್ ಮತ್ತು ಕಾಸರ ಗೋಡು ಜಿಲ್ಲೆಯ ಕೂಡಲು ನಿವಾಸಿ ಮೊಹಮ್ಮದ್ ಕುಂಞÂ ಎಂಬಿಬ್ಬರೇ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರನ್ನು ಬುಧವಾರದಂದು ಕೊಡಗಿಗೆ ಕರೆತಂದ ಪೊಲೀಸರು, ವೀರಾಜಪೇಟೆಯಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿ ಸಮಗ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಘಟನೆ ಕುರಿತಂತೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಉಳಿದ ಇಬ್ಬರನ್ನು ಸುಹೈಲ್ ಮತ್ತು ಜೌರಫ್ ಎಂದು ಗುರುತಿಸ ಲಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಇದೀಗ ತಲೆಮರೆಸಿ ಕೊಂಡಿರುವ ಇಬ್ಬರು ಆರೋಪಿಗಳು ಮುಂದಿನ ಶನಿವಾರದೊಳಗೆ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಬೇಕು ಮತ್ತು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಶನಿವಾರದ ಒಳಗೆ ಠಾಣೆಗೆ ತಂದು ಒಪ್ಪಿಸಬೇಕು ಎಂದು ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಕೆ.ಎನ್. ಸುರೇಶ್ ಬೋಪಣ್ಣ ಅವರು ನೋಟೀಸ್ ಜಾರಿಗೊಳಿಸಿದ್ದಾರೆ.

ನಾಲ್ವರು ಆರೋಪಿಗಳು ಕಳೆದ ಶನಿವಾರ ಬೆಳಿಗ್ಗೆ ಹಾತೂರು ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ವೃದ್ಧ ಮುಸ್ಲಿಯಾರ್ ಮೂಸ ಎಂಬವರನ್ನು ಅವರ ಪತ್ನಿಯ ಎದುರಿನಲ್ಲೇ ತೀವ್ರವಾಗಿ ಥಳಿಸಿ ಗಾಯ ಗೊಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂಸ ಮುಸ್ಲಿಯಾರ್ ಅವರು ನೀಡಿದ ದೂರಿನ ಆಧಾರದಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಸೆಕ್ಷನ್ 448, 323 ಮತ್ತು ಐಪಿಸಿ 34 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಕೃತ್ಯಕ್ಕೆ ಬಳಸಿದ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಗೋಣಿಕೊಪ್ಪ ಪೊಲೀಸ್ ತಂಡ ಕಾಸರಗೋಡಿಗೆ ತೆರಳಿ ಮಾಹಿತಿ ಸಂಗ್ರಹಿಸಿತು. ಈ ವೇಳೆ ಪೊಲೀಸರಿಗೆ ಲಭಿಸಿದ ಖಚಿತ ಸುಳಿವಿನ ಆಧಾರದಲ್ಲಿ ಆರೋಪಿಗಳ ಬಂಧನವಾಗಿದೆ.

ಬುಧವಾರದಂದು ವೀರಾಜ ಪೇಟೆಯ ಡಿವೈಎಸ್ಪಿ ಕಚೇರಿಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ.ಯಾಕೂಬ್, ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಲೀರ ಎಂ. ರಶೀದ್, ಹಾತೂರು ಮೊಹಿದೀನ್ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎ.ಎಂ.ಹಂಸ, ಮೂಸ ಮುಸ್ಲಿಯಾರ್, ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ರಶೀದ್, ಶಮಿಲ್, ಸಂಶು ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ.ಯಾಕೂಬ್ ಅವರು, ಅಪರಿಚಿತರು ಎನ್ನಲಾದ ನಾಲ್ವರು ನಡೆಸಿದ ಕೃತ್ಯದ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಗೋಣಿಕೊಪ್ಪ ಪೊಲೀಸರು ವೀರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇದರಿಂದ ಕಳೆದ ಎರಡು ಮೂರು ದಿನಗಳಿಂದ ಜನರಲ್ಲಿದ್ದ ಗೊಂದಲ ಪರಿಹಾರವಾಗಿದೆ ಎಂದರು.