ಸಿದ್ದಾಪುರ, ಫೆ. 26: ನದಿ ತೀರದ ನಿವಾಸಿಗಳು ನದಿ ತೀರವನ್ನು ತೊರೆಯುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನದಿ ತೀರದಲ್ಲಿ ಯಾವುದೇ ಕಾರಣಕ್ಕೂ ವಾಸ ಮಾಡಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು. ನದಿ ತೀರದ ನಿವಾಸಿಗಳ 20 ವರ್ಷಗಳ ಕನಸು ಇದೀಗ ನನಸಾಗಿದ್ದು ಸರ್ಕಾರವು ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದರು. ಇನ್ನು ಮುಂದಕ್ಕೆ ಯಾವುದೇ ರೀತಿಯ ಭಯವಿಲ್ಲದೇ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿದ ಜಾಗದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತೆ ಕರೆ ನೀಡಿದರು.

ಈ ಹಿಂದೆ ವಾಸವಾಗಿದ್ದ ನದಿ ತೀರದಲ್ಲಿ ವಾಸ ಮಾಡಲು ಅವಕಾಶ ನೀಡುವುದಿಲ್ಲ. ಆ ಜಾಗದಲ್ಲಿ ಇರುವ ಮನೆಗಳನ್ನು ನೆಲಸಮಗೊಳಿಸ ಲಾಗುವುದು, ಈ ಹಿಂದೆ ವಾಸವಾಗಿದ್ದ ಜಾಗದಲ್ಲಿ ಬೇಸಾಯ ಮಾಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ 108 ಸಂತ್ರಸ್ತ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದ್ದು, ಈ ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ನಿವೇಶನ ಇರುವವರು ನಿವೇಶನವನ್ನು ಪಡೆದುಕೊಂಡಲ್ಲಿ ಅಂತಹವರ ನಿವೇಶನವನ್ನು ರದ್ದುಗೊಳಿಸಲಾಗುವುದು ಮುಂದಿನ ದಿನಗಳಲ್ಲಿ ನದಿ ತೀರದ ನಿವಾಸಿಗಳು ಸ್ಥಳಾಂತರಗೊಳ್ಳದಿದ್ದಲ್ಲಿ, ಸರ್ಕಾರ ಗುರುತಿಸಿದ ಪುನರ್ವಸತಿ ಜಾಗಕ್ಕೆ ತೆರಳದಿದ್ದಲ್ಲಿ ಅಂತಹ ಕುಟುಂಬಗಳಿಗೆ ಯಾವುದೇ ರೀತಿಯ ಪರಿಹಾರ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ. ಅಲ್ಲದೇ ಸರ್ಕಾರದ ವತಿಯಿಂದ ಪರಿಹಾರ ಧನವನ್ನು ಕೂಡ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ 30x30 ಅಳತೆಯ ಜಾಗವನ್ನು ಹಂಚಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳ ಲಾಗಿತ್ತು. ಆದರೆ ನೆಲ್ಯಹುದಿಕೇರಿ ಸಂತ್ರಸ್ತರು ತನಗೆ ಮನವಿ ಮಾಡಿದ ಮೇರೆಗೆ ತಾನು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾ ಧಿಕಾರಿಯವರೊಂದಿಗೆ ಚರ್ಚೆ ನಡೆಸಿ ಇದೀಗ 30x40 ಅಳತೆಯ ನಿವೇಶನವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಆಸಕ್ತಿ ವಹಿಸಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ಯಾವುದೇ ಜಾತಿ-ಮತ ಬೇಧವಿಲ್ಲದೇ ತಾರತಮ್ಯ ಮಾಡದೇ ಪಾರದರ್ಶಕವಾಗಿ ಲಾಟರಿ ಮುಖಾಂತರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ರೂ. 5 ಲಕ್ಷವನ್ನು ನೀಡಲಾಗುವುದೆಂದು ತಿಳಿಸಿದರು.

ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಸಲಾಗಿದ್ದು ಈ ಹಿಂದೆ ಸರ್ಕಾರದ ವತಿಯಿಂದ ಸಂತ್ರಸ್ತರಿಗೆ 30x30 ಅಳತೆಯ ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಸಂತ್ರಸ್ತರು ತಮಗೆ ಹೆಚ್ಚಿನ ಜಾಗ ನೀಡುವಂತೆ ತಿಳಿಸಲಾಗಿದ್ದು ಹಾಗೂ ಈ ಹಿಂದಿನ ನಿವೇಶನ ಹಂಚಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಶಾಸಕ ಅಪ್ಪಚ್ಚು ರಂಜನ್ ಅವರ ಮುತುವರ್ಜಿಯಿಂದ 30x40 ಅಳತೆಯ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ಈ ನಿವೇಶನದಲ್ಲಿ ಸರ್ಕಾರದ ವಸತಿ ಯೋಜನೆಯಡಿ ಯಲ್ಲಿ ಪಂಚಾಯಿತಿ ಮೂಲಕ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಅಭ್ಯತ್ ಮಂಗಲ ಗ್ರಾಮದ ಅರೆಕಾಡುವಿನಲ್ಲಿರುವ ಸಂತ್ರಸ್ತರಿಗೆ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ 148 ನಿವೇಶನದ ನಕಾಶೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಈ ಜಾಗದಲ್ಲಿ ಪಾರ್ಕ್, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಸೇರಿರುವ ಉತ್ತಮ ವ್ಯವಸ್ಥೆಯ ಬಡಾವಣೆಯ ಯೋಜನೆಯನ್ನು ಮಾಡಲಾಗುವುದೆಂದು ತಿಳಿಸಿದರು. ಈಗಾಗಲೇ ಪ್ರವಾಹಕ್ಕೆ ಸಿಲುಕಿ ನದಿ ತೀರದಲ್ಲಿರುವ ಅನಧಿಕೃತ ಮನೆಗಳ ಪಟ್ಟಿಯನ್ನು ಎ, ಬಿ, ಸಿ ಗಳಾಗಿ 3 ವಿಂಗಡಣೆ ಮಾಡಲಾಗಿದೆ. ಎ ಮತ್ತು ಬಿ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ಸಿ ಪಟ್ಟಿಯಲ್ಲಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಮನೆ ದುರಸ್ಥಿಗೆ ರೂ. 50 ಸಾವಿರ ನೀಡಲಾಗುವುದೆಂದು ಜವರೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋಮ ವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಉಪ ತಹಶೀಲ್ದಾರ್ ಚಿಣ್ಣಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಪಿ.ಡಿ.ಓ. ಅನಿಲ್ ಕುಮಾರ್ ಗ್ರಾಮ ಲೆಕ್ಕಿಗ ಸಂತೋಷ್, ತಾ.ಪಂ. ಸದಸ್ಯೆ ಸುಹಾದಾ, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ವಿ.ಎಸ್.ಎಸ್.ಎನ್. ಅಧ್ಯಕ್ಷ ಪಿ.ಸಿ. ಅಚ್ಚಯ್ಯ, ಮಾಜಿ ತಾ.ಪಂ. ಅಧ್ಯಕ್ಷ ವಿ.ಕೆ. ಲೋಕೇಶ್ ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

-ಚಿತ್ರ ವರದಿ : ವಾಸು ಎ.ಎನ್.