ವೀರಾಜಪೇಟೆ, ಫೆ. 26 : ಗೋಣಿಕೊಪ್ಪಲಿನಿಂದ ಬಿಟ್ಟಂಗಾಲ-ಪೆರಂಬಾಡಿ ಬೈಪಾಸ್ ಮಾರ್ಗವಾಗಿ ಕೇರಳಕ್ಕೆ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಹಲಸು ಮತ್ತು ಹೆಬ್ಬಲಸಿನ 23 ಭಾರೀ ಗಾತ್ರದ ಮರದ ನಾಟಾಗಳನ್ನು ವೀರಾಜಪೇಟೆ ಅರಣ್ಯ ಸಂಚಾರಿದಳ ವಶಪಡಿಸಿಕೊಂಡಿದೆ. ಕಾಫೀ ಬೂಸಾವನ್ನು ತುಂಬಿಕೊಂಡು ಬರುತ್ತಿದ್ದ ಕೇರಳ ರಾಜ್ಯದ ದಾಖಲೆಯನ್ನು ಹೊಂದಿದ ಕೆ.ಎಲ್.10 ಆರ್. 7630 ಸಂಖ್ಯೆಯ ಲಾರಿಯನ್ನು ಸಂಶಯದ ಮೇರೆಗೆ ಪರಿಶೀಲನೆಗೆ ಒಳಪಡಿಸಿದಾಗ ಮರದ ನಾಟಾಗಳು ಇರುವುದು ಕಂಡು ಬಂತು. ಲಾರಿಯ ಚಾಲಕ ಹಾಗೂ ಕ್ಲೀನರ್ ತಲೆಮರೆಸಿಕೊಂಡಿದ್ದಾರೆ. ಅಮಾನತು ಪಡಿಸಿಕೊಂಡ ವಸ್ತುಗಳ ಮೌಲ್ಯ ರೂ. 10 ಲಕ್ಷ ಇರಬಹು ದೆಂದು ಅಂದಾಜಿಸಲಾಗಿದೆ.

ವಲಯ ಅರಣ್ಯ ಸಂಚಾರಿ ದಳದ ಎ.ಎಸ್.ಐ.ಅರುಣ್ ಕುಮಾರ್ ಮಾರ್ಗದರ್ಶನದ ಕಾರ್ಯಾಚರಣೆ ಯಲ್ಲಿ ಉಪವಲಯ ಅರಣ್ಯಾಧಿಕಾರಿ ಹೆಚ್.ಬಿ. ಉಮೇಶ್, ಸಿಬ್ಬಂದಿಗಳಾದ ಬಿ.ಎಲ್. ರಾಘವೇಂದ್ರ, ಕೆ.ಸಿ. ಜಯಕುಮಾರ್, ಕೆ.ಆರ್. ರಮೇಶ್, ಇಲಾಖಾ ಚಾಲಕ ಹಮೀದ್ ಪಾಲ್ಗೊಂಡಿದ್ದರು.