ಮಡಿಕೇರಿ, ಫೆ. 27: ಜಿಲ್ಲೆಯಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ, ಹೀಗೆ ಹಲವು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳ ರಫ್ತಿಗೆ ವಿಫುಲ ಅವಕಾಶವಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು ತಿಳಿಸಿದ್ದಾರೆ.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಮತ್ತು ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯ ಮಿಗಳು ಹಾಗೂ ಭಾವಿ ರಫ್ತುದಾರ ರಿಗಾಗಿ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ನಡೆದ ‘ರಫ್ತು ಜಾಗೃತಿ ಶಿಬಿರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರಕ್ಕೆ ಬೇಕಾಗಿರುವ ಸಂಪನ್ಮೂಲಗಳನ್ನು ಉಪಯೋಗಿಸಿ ಕೊಂಡು ರಫ್ತಿಗೆ ಆದ್ಯತೆ ನೀಡಿದಾಗ ಮಾತ್ರ ಜಿಡಿಪಿ ದರ ಹೆಚ್ಚಳವಾಗಲಿದೆ. ಆದ್ದರಿಂದ ವಿಶ್ವ ವ್ಯಾಪಾರ ಸಂಸ್ಥೆಯ ಒಡಂಬಡಿಕೆಯ ಮಾರ್ಗದರ್ಶನದಂತೆ ರಫ್ತುವಿಗೆ ಗಮನ ಹರಿಸಬಹುದಾಗಿದೆ ಎಂದು ಅವರು ತಿಳಿಸಿದರು.

ರಫ್ತುಗೆ ಹೆಚ್ಚಿನ ಉತ್ತೇಜನ ನೀಡಿದಾಗ ವಿದೇಶಿ ಕರೆನ್ಸಿಗೆ ಪೈಪೋಟಿ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ದೇಶಿಯ ರೂಪಾಯಿ ಮೌಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆಮದಿಗಿಂತ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ರಾಷ್ಟ್ರದಲ್ಲಿ ಇಂಧನ ಆಮದಿಗಾಗಿ ಹೆಚ್ಚಿನ ಹಣ ವ್ಯಯ ಮಾಡಲಾಗುತ್ತಿದೆ. ಇದರಿಂದ ವಿದೇಶಿ ಕರೆನ್ಸಿ ವಿನಿಮಯದಲ್ಲಿ ಏರುಪೇರು ಉಂಟಾಗುತ್ತಿದೆ. ಆದ್ದರಿಂದ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಕರ್ನಾಟಕ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಶಿವಕುಮಾರ್ ಮಾತನಾಡಿ ಕರ್ನಾಟಕ ಹಣಕಾಸು ಸಂಸ್ಥೆಯಿಂದ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು, ಇದನ್ನು ಬಳಸಿಕೊಳ್ಳು ವಂತಾಗಬೇಕು ಎಂದು ಅವರು ಹೇಳಿದರು.

ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಮಂಜುನಾಥ ಸ್ವಾಮಿ ಮಾತನಾಡಿ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ 145 ದೇಶಗಳನ್ನು ಒಳಗೊಂಡಿದ್ದು, ರಫ್ತು ಚಟುವಟಿಕೆಗೆ ಹೆಚ್ಚಿನ ಗಮನಹರಿಸಬೇಕಿದೆ. ಮುಕ್ತ ವ್ಯಾಪಾರಕ್ಕೆ ಅವಕಾಶವಿದ್ದು, ತರಕಾರಿ, ಹಣ್ಣು, ಜೇನು, ಸಂಬಾರ ಪದಾರ್ಥ ಹೀಗೆ ರಫ್ತುಗೆ ಗಮನಹರಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರದ ಸಹಕಾರ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಸರ್ಕಾರ ಕೃಷಿಕರಿಗಾಗಿ ಹಲವು ಕಾರ್ಯಕ್ರಮ ಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಅಧಿಕಾರಿಗಳ ಹಂತದಲ್ಲಿ ಸಮರ್ಪಕ ವಾಗಿ ಅನುಷ್ಠಾನ ವಾಗಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೇವಲ 20 ಸೆಂಟ್ ಜಾಗಕ್ಕೆ ಮಾತ್ರ ಭೂ ಪರಿವರ್ತನೆಗೆ ಅವಕಾಶವಿದೆ. ಒಂದು ಗುಡಿ ಕೈಗಾರಿಕೆ ಸ್ಥಾಪನೆ ಮಾಡಬೇಕಾದರೂ ಸಹ ಹೆಚ್ಚಿನ ಜಾಗ ಮತ್ತು ಕಟ್ಟಡ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕಿದೆ ಎಂದು ಅವರು ತಿಳಿಸಿದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಪ್ರವೀಣ್ ರಾಮದುರ್ಗ ಮಾಹಿತಿ ನೀಡಿ, ವಿದೇಶಿ ಭೇಟಿಗಳಿಗಾಗಿ ಮಾರುಕಟ್ಟೆ ಅಭಿವೃದ್ಧಿ ನೆರವು ಯೋಜನೆ, ರಫ್ತು ಜಾಗೃತಿ ಕಾರ್ಯಕ್ರಮ, ಸೆಮಿನಾರ್, ಕಾರ್ಯಾಗಾರ ಮತ್ತು ಸಮಾವೇಶ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸುವುದು ಕೈಗಾರಿಕಾ ಚಟುವಟಿಕೆಗಳಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್‍ವೇರ್, ಏರೋಸ್ಪೇಸ್, ಆಟೋಮೊಬೈಲ್, ಎಂಜಿನಿಯರಿಂಗ್ ಪೆಟ್ರೋಲಿಯಂ ಉತ್ಪನ್ನಗಳು, ರತ್ನಗಳು ಮತ್ತು ಆಭರಣ ಗಳು, ರೆಡಿಮೇಡ್ ಉಡುಪುಗಳು, ರೇಷ್ಮೆ, ರಾಸಾಯನಿಕಗಳು, ಕಾಫಿ, ಮಸಾಲೆಗಳು, ಗೋಡಂಬಿ, ಹೂಗಳು, ಗೆರ್ಕಿನ್ಸ್, ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು ಮತ್ತು ಸಮುದ್ರ ಉತ್ಪನ್ನಗಳು ಭಾರತದಿಂದ ರಫ್ತಾಗುವ ವಸ್ತುಗಳಾಗಿವೆ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಉತ್ಪನ್ನಗಳು, ಸಸ್ಯಜನ್ಯ ಎಣ್ಣೆ, ಏರೋಸ್ಪೇಸ್, ರಸಗೊಬ್ಬರಗಳು, ಕಚ್ಚಾ ಪೆಟ್ರೋಲಿಯಂ, ಜೀವ ಉಳಿಸುವ ಔಷಧಿಗಳು, ಗೆರ್ಕಿನ್ ಬೀಜಗಳು, ಕಚ್ಚಾ ಗೋಡಂಬಿ ಭಾರತಕ್ಕೆ ಆಮದಾಗುವ ವಸ್ತುಗಳಾಗಿವೆ.

ಜಾಗತಿಕ ಕಾಫಿ ರಫ್ತುಗಳಲ್ಲಿ ಭಾರತವು ಶೇ. 1.60ರಷ್ಟು ರಫ್ತುಮಾಡಿ 16 ನೇ ಸ್ಥಾನದಲ್ಲಿದೆ ಬ್ರೆಜಿಲ್ ಶೇ. 14.50 ಕಾಫಿ ರಫ್ತು ಪಾಲನ್ನು ಹೊಂದಿರುವ ಅತಿದೊಡ್ಡ ರಫ್ತುದಾರ ದೇಶವಾಗಿದೆ ಎಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಎನ್. ಪ್ರಕಾಶ್, ಮೋಂತಿ ಗಣೇಶ್ ಇತರರು ಇದ್ದರು. ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಾಯಕ ನಿರ್ದೇಶಕಿ ಎಸ್.ಜಿ. ಸರಸ್ವತಿ ನಿರೂಪಿಸಿ, ವಂದಿಸಿದರು.