ಮಡಿಕೇರಿ, ಫೆ. 27: ಶುದ್ಧ ಕುಡಿಯುವ ನೀರನ್ನು ನೀಡುವ ಸಲುವಾಗಿ ಕರಿಕೆ ಗ್ರಾಮದಲ್ಲಿ ನೀರಿನ ಘಟಕವನ್ನು ನಿರ್ಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಈ ಘಟಕ ಸಮರ್ಪಕ ಸೇವೆ ನೀಡಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕರಿಕೆ ಗ್ರಾಮದ ಚೆತ್ತುಕಾಯದಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಶಂಕು ಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಸ್ಥರಿಗೂ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆ ಇದೆ ಎಂದರು.
ಜಿ.ಪಂ. ಮತ್ತು ಐಟಿಡಿಪಿ ಇಲಾಖೆ ವತಿಯಿಂದ ರೂ. 30 ಲಕ್ಷ ವೆಚ್ಚದಲ್ಲಿ ಕರಿಕೆ ಗ್ರಾಮದ ಪಳ್ಳಿಕಳ ರಸ್ತೆಯ 600 ಮೀಟರ್ ಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ರೂ. 25 ಲಕ್ಷ ವೆಚ್ಚದಲ್ಲಿ ಸಿಮೆಂಟ್‍ನಿಂದ ನಿರ್ಮಾಣ ಮಾಡಲಾದ ಶೇಷಪ್ಪ ರಸ್ತೆ ಮತ್ತು ಚರಂಡಿ, ರೂ. 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕುಂಡೆತ್ತಿಕಾನ ಮುಖ್ಯ ರಸ್ತೆ ಮತ್ತು ಚರಂಡಿ ನಿರ್ಮಾಣ ಪೂರ್ಣಗೊಂಡ ಕಾಮಗಾರಿ ಮತ್ತು 2018-19ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡ ಕಾಲೋನಿಗಳ ಅಭಿವೃದ್ಧಿಯಡಿ ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಪಂಚಾಯತ್ ರಾಜ್ ಇಲಾಖೆಯ ಎಇಇ ಶ್ರೀಕಂಠಯ್ಯ, ಲೋಕೋಪ ಯೋಗಿ ಇಲಾಖೆಯ ಎಇಇ ಹೆಚ್.ಬಿ ಶಿವರಾಂ, ಕಿರಿಯ ಅಭಿಯಂತರ ದೇವರಾಜ್, ಆರ್.ಎಂ.ಸಿ ಸದಸ್ಯ ಕಾಳನ ರವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ಕೃತಿಕಾ, ಕರಿಕೆ ಗ್ರಾ.ಪಂ ಪಿಡಿಒ ಬಿಪಿನ್, ಗ್ರಾಮಸ್ಥ ಹೊಸಮನೆ ಹರೀಶ್ ಇತರರು ಇದ್ದರು.