ಸುಂಟಿಕೊಪ್ಪ, ಫೆ. 27: ಮಾದಾಪುರ-ಇಗ್ಗೋಡ್ಲು ಗ್ರಾಮದ ಜಂಬೂರು ಬಾಣೆಯ ಆಶ್ರಯ ಕಾಲೋನಿಯಲ್ಲಿ ನೂತನ ಶ್ರೀ ಭಗತ್ ಸಿಂಗ್ ಸಂಘವನ್ನು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ಸಲ್ಲಿಸಿ ಸನ್ನಿಧಿಯ ಆವರಣದಲ್ಲಿ ಉದ್ಘಾಟಿಸಲಾಯಿತು.

ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾದಾಪುರ ಠಾಣಾಧಿಕಾರಿ ಸುರೇಶ್ ಅವರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಬದುಕಿನ ಸಾಧನೆಯನ್ನು ಮೆಲುಕು ಹಾಕುತ್ತಾ, ಅವರ ಹೆಸರನ್ನು ನಾಮಕರಣಗೊಳಿಸಿಕೊಂಡಿರುವ ಈ ಸಂಘಟನೆಯ ಪ್ರಮುಖರು ಸಮಾಜಸೇವೆಯಲ್ಲಿ ತೊಡಗಿಕೊಂಡು ಜಾತಿ, ಧರ್ಮ ಎನ್ನದೇ ಅವರ ಕಷ್ಟದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.

ಭಗತ್ ಸಿಂಗ್ ಸಂಘದ ಅಧ್ಯಕ್ಷ ಬಿ.ಕೆ. ಬಾಲಕೃಷ್ಣ ಮಾತನಾಡಿ, ಎಲ್ಲಾ ದೇವಾಲಯಗಳು, ಆಸ್ಪತ್ರೆ, ಶಾಲೆಗಳ ಸುತ್ತಮುತ್ತ ಶ್ರಮದಾನ, ರಕ್ತದಾನ, ಗ್ರಾಮದ ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದರು.

ಈ ಸಂದರ್ಭ ಐಟಿಎಂ ಕೊಡಗು ಜಿಲ್ಲೆಯ 2ನೇಯ ಬ್ರಾಂಚ್ ಅಭಿವೃದ್ಧಿ ವ್ಯವಸ್ಥಾಪಕರಾಗಿ ಆಯ್ಕೆಯಾದ ಮಾದಾಪುರದ ಉಮ್ಮರ್ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾದಾಪುರ ಆಶ್ರಯ ಕಾಲೋನಿಯ ಚಾಮುಂಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಕೊರಗಪ್ಪ, ಉಸ್ತಾದ್ ಸೈಯದ್ ಆಲಿ, ಸ್ಥಳೀಯ ಉದ್ಯಮಿ ರಾಜನ್, ಸಾಮಾಜಿಕ ಕಾರ್ಯಕರ್ತ ಸಿ.ಜಿ. ಹರೀಶ್, ಪರಿಸರ ಪ್ರೇಮಿ ಅಣ್ಣು, ಎಫ್.ಎಂ.ಸಿ. ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಪಿ. ಪೂಣಚ್ಚ, ಚಾಮುಂಡೇಶ್ವರಿ ದೇವಾಲಯದ ಮಾಜಿ ಅಧ್ಯಕ್ಷ ಎಂ.ಕೆ. ಕೃಷ್ಣ, ಗ್ರಾಮದ ಹಿರಿಯರಾದ ಕೃಷ್ಣ ಕುಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಂತರ ಮಾದಾಪುರ ನಾಟಿ ಕಿಡ್ಸ್, ಅಮ್ಮತ್ತಿಯ ಚೌಡೇಶ್ವರಿ ನೃತ್ಯ ಶಾಲೆ, ಅಮ್ಮತ್ತಿಯ ಡಿ.ಸಿ.ಸಿ., ಟೀಮ್ ಆಕ್ಷನ್ ವೀವ್ಸ್ ತಂಡದವರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಗರಗಂದೂರಿನ ಅಭಿಜಿತ್ ಅವರಿಂದ ಗಾಯನ ಕಾರ್ಯಕ್ರಮಗಳು ನಡೆಯಿತು.