ವೀರಾಜಪೇಟೆ, ಫೆ. 27: ಕ್ರೀಡೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾ ಪಟುಗಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಅಂತರ್ರಾಷ್ಟ್ರೀಯ ರಗ್ಬಿ ಕ್ರೀಡಾಪಟು ಮತ್ತು ಯು.ಬಿ.ಎ. ಸಂಸ್ಥೆಯ ಉಪಾಧ್ಯಕ್ಷ ಮಾದಂಡ ತಿಮ್ಮಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ಮೈದಾನದಲ್ಲಿ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ತಿಮ್ಮಯ್ಯ ಪ್ರಪಂಚದಲ್ಲಿ ಕಾಲ್ಚೆಂಡು ಪಂದ್ಯಕ್ಕಿರುವ ಪ್ರಭಲವಾದ ಪ್ರಚಾರ ಕೊಡಗಿನ ಪ್ರಮುಖ ಕ್ರೀಡೆಯಾದ ಹಾಕಿ ಕ್ರೀಡೆಗಿಲ್ಲ. ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ದೊರಕುವಂತಾಗಬೇಕು. ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ವಿದ್ಯಾಭ್ಯಾಸದ ಕೊರತೆ ಎದ್ದು ಕಾಣಿಸುತಿದ್ದು, ಉದ್ಯೋಗ ದೊರಕುವಲ್ಲಿ ವಿಫಲರಾಗುತಿರುವುದು ದುರದೃಷ್ಟಕರ ಸಂಗತಿ. ಕೊಡಗಿನಲ್ಲಿ ಕಾಲ್ಚೆಂಡು ಪಂದ್ಯಾಟಗಳು ಆಯೋಜನೆಗೊಳ್ಳುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದರು.

ಉದ್ಯಮಿಗಳಾದ ಬಿ.ಜೆ. ಬೋಪಣ್ಣ, ಸಚ್ಚು ಸಲೀಮ್, ಸತೀಶ್, ಹೇಮಂತ್ ಬಿ.ವಿ., ಸಲೀಂ ಅಕ್ಬರ್, ಮನೋಜ್ ಕುಮಾರ್ ನಗರ ಭಾ.ಜ.ಪ. ಅಧ್ಯಕ್ಷ ಅನಿಲ್ ಮಂದಣ್ಣ, ಸಾಗರ್ ಉಪಸ್ಥಿತರಿದ್ದರು.

ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು 44 ತಂಡಗಳು ಭಾಗವಹಿಸಿದ್ದು, ಪಂದ್ಯಾಟದಲ್ಲಿ ನೈಜೀರಿಯ ಮತ್ತು ಸೂಡಾನ್ ದೇಶದ ಕ್ರೀಡಾಪಟುಗಳು ಆಟವಾಡಿದ್ದು ವಿಶೇಷತೆ. ಅಂತಿಮ ಸುತ್ತಿಗೆ ನಾಲ್ಕು ತಂಡಗಳು ಪಾದಾರ್ಪಣೆ ಮಾಡಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯವು ಪಾಲಿಬೆಟ್ಟ ನೆಹರು ಎಫ್.ಸಿ.ಬಿ. ಮತ್ತು ಶ್ರೀ ಮುತ್ತಪ್ಪನ್ ಎಫ್.ಸಿ. ತಂಡಗಳ ನಡುವೆ ನಡೆದು ನೆಹರು ಎಫ್.ಸಿ. ತಂಡ ವಿಜೇಯವಾಯಿತು. ದ್ವೀತಿಯ ಸೆಮಿಫೈನಲ್ ಪಂದ್ಯಾಟವು ನೆಹರು ಎಫ್.ಸಿ. (ಎ) ಪಾಲಿಬೆಟ್ಟ ಮತ್ತು ಮಾತೃಭೂಮಿ ಎಫ್.ಸಿ. ಒಂಟಿಅಂಗಡಿ ತಂಡಗಳ ನಡುವೆ ಪಂದ್ಯಾಟ ನಡೆದು 2-0 ಗೋಲುಗಳಿಂದ ಮಾತೃಭೂಮಿ ಎಫ್.ಸಿ. ತಂಡವನ್ನು ಮಣಿಸಿ ಫೈನಲ್‍ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟವು ಪಾಲಿಬೆಟ್ಟ ನೆಹರು ಎಫ್.ಸಿ.ಎ. ಮತ್ತು ಬಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನೆಹರು ಎಫ್.ಸಿ.ಬಿ. ತಂಡ 4-1 ಗೊಲುಗಳಿಂದ ಎ ತಂಡವನ್ನು ಮಣಿಸಿ ಸಿ.ಸಿ.ಬಿ. ಕಪ್ ತನ್ನದಾಗಿಸಿಕೊಂಡಿತ್ತು.

ಪಂದ್ಯಾವಳಿಯಲ್ಲಿ ಕೆಎಲ್-10 ತಂಡ ಉತ್ತಮ ತಂಡವಾಗಿ ಹೊರಹೊಮ್ಮಿತ್ತು, ಉತ್ತಮ ಸ್ಕೋರರ್ ಕೌಬಾಯ್ಸ್ ತಂಡ ನಾಸೀರ್, ಉತ್ತಮ ಡಿಫೆಂಡರ್ ಪ್ರಶಸ್ತಿ ಒಂಟಿಅಂಗಡಿ ತಂಡದ ಫ್ರಾಂಕ್, ವಿನಾಯಕ ಎಫ್.ಸಿ. ತಂಡದ ಹರ್ಷ ಭರವಸೆಯ ಆಟಗಾರ ಪ್ರಶಸ್ತಿ, ಹಿರಿಯ ಆಟಗಾರ ಪ್ರಶಸ್ತಿಯನ್ನು ನೆಹರು ಎಫ್.ಸಿ. ತಂಡದ ಹರೀಶ್, ಪಂದ್ಯಾಟದ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ನೆಹರು ಎಫ್.ಸಿ. ತಂಡದ ನಾಸಿಫ್, ಉತ್ತಮ ಗೋಲಿ ಪ್ರಶಸ್ತಿಯನ್ನು ನೆಹರು ಎಫ್.ಸಿ.ಎ. ತಂಡದ ಮಣಿ, ಕೌಶಲ್ಯತೆಗಾಗಿ ಕೆಎಲ್-10 ತಂಡದ ಶೀಬಿ, ಪಂದ್ಯಾಟದ ಉತ್ತಮ ಆಟಗಾರ ನೆಹರು ಎಫ್.ಸಿ.ಯ ಮಹದೇವು ಪಂದ್ಯ ನಿರ್ಣಾಯಕ ಆಟಗಾರ ಪ್ರಶಸ್ತಿಯನ್ನು ಅಣ್ಣಪ್ಪ ಪಡೆದುಕೊಂಡರು.

ಪಂದ್ಯಾಟದ ಆಯೋಜಕರಾದ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ನಗರ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಪಂದ್ಯಾಟದಲ್ಲಿ ಭಾಗಿಗಳಾದರು. -ಕೆ.ಕೆ.ಎಸ್.