ಮಡಿಕೇರಿ, ಫೆ. 27: ಕಳೆದ ಹಲವು ದಶಕಗಳಿಂದ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಬದುಕು ಕಟ್ಟಿಕೊಂಡಿರುವ ದಕ್ಷಿಣ ಕೊಡಗಿನ ತಿತಿಮತಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ದೇವರಕಾಡು ಪೈಸಾರಿ ನಿವಾಸಿಗಳು ನಡೆದಾಡಲು ‘ಹಾದಿ’ಯೇ ಇಲ್ಲದ ಅತಂತ್ರ ಪರಿಸ್ಥಿತಿ ಯನ್ನು ಎದುರಿಸುತ್ತಿದ್ದಾರೆ. ಸುಮಾರು 25 ಕುಟುಂಬಗಳನ್ನು ದಿಗ್ಬಂಧನ ದಲ್ಲಿಟ್ಟಂತ್ತಾಗಿದ್ದು, ಜಿಲ್ಲಾಡಳಿತ ತಕ್ಷಣ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ತಮ್ಮ ಅಳಲು ತೋಡಿಕೊಂಡ ಪೈಸಾರಿ ನಿವಾಸಿಗಳು, ದೇವರಕಾಡು ಪೈಸಾರಿಯಲ್ಲಿ ಕಳೆದ ಆರೇಳು ದಶಕಗಳಿಂದ ಸುಮಾರು 25 ಕುಟುಂಬಗಳು ವಾಸವಿದ್ದು, ಕೂಲಿ ಕೆಲಸವನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದೇವೆ. ಈ ಪೈಸಾರಿಗೆ ಇಲ್ಲಿಯವರೆಗೆ ಇದ್ದ ಹಾದಿ ಖಾಸಗಿ ಜಾಗದಲ್ಲಿತ್ತು, ಪ್ರಸ್ತುತ ಈ ಹಾದಿ ಮುಚ್ಚಲ್ಪಟ್ಟಿದ್ದು, ನಮಗೆ ಇತರೆ ಹಾದಿಯೇ ಇಲ್ಲದ ಸ್ಥಿತಿ ನಿರ್ಮಾಣ ವಾಗಿದೆ ಎಂದು ತಿಳಿಸಿದರು.

ಕಳೆದ ಎರಡು ತಿಂಗಳ ಹಿಂದೆ ಖಾಸಗಿ ಜಾಗದ ಮಾಲೀಕರು ಹಾದಿಯನ್ನು ಮುಚ್ಚುವ ಬಗ್ಗೆ ಮುನ್ಸೂಚನೆ ನೀಡಿ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ರಸ್ತೆ ನಿರ್ಮಿಸಿಕೊಡುವಂತೆ ಕೋರಿಕೊಂಡಿದ್ದರು ಯಾವುದೇ ಸ್ಪಂದನ ದೊರಕಿಲ್ಲ. ಇದರಿಂದ ತಿತಿಮತಿ ಪಟ್ಟಣಕ್ಕೆ ಅಂದಾಜು ಮೂರುವರೆ ಕಿ.ಮೀ. ಬಳಸು ಹಾದಿಯಲ್ಲಿ ತೆರಳಬೇಕಾದ ಪರಿಸ್ಥಿತಿ ಇದೆ. ಹಳೆಯ ಹಾದಿಯಲ್ಲಿ ಈ ದೂರ ಕೇವಲ ಒಂದರಿಂದ ಒಂದೂವರೆ ಕಿ.ಮೀ.ನಷ್ಟಾಗಿತ್ತು ಎಂದರು.

ಶವ ಸಾಗಿಸಲು ಕಷ್ಟ

ಹಳೆಯ ದಾರಿ ಮುಚ್ಚಲ್ಪಟ್ಟಿರುವು ದರಿಂದ ಪ್ರಸ್ತುತ ಯಾರಾದರು ಸಾವನ್ನಪ್ಪಿದರೆ ಮೃತದೇಹ ಸಾಗಿಸಲು ಕೂಡ ದಾರಿ ಇಲ್ಲದ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದಿ ನಿಂದಲೂ ತಾವಿರುವ ಜಾಗಕ್ಕೆ ಕಂದಾಯವನ್ನು ನಿಯಮಿತವಾಗಿ ಪಾವತಿಸಿಕೊಂಡು ಬರುತ್ತಿರುವ ಬಡವರ್ಗದ ನಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಸೌಲಭ್ಯ ಕಲ್ಪಿಸಲು ಯಾರು ಮುಂದಾಗುತ್ತಿಲ್ಲ. ಚುನಾವಣಾ ಸಂದರ್ಭಗಳಲ್ಲಷ್ಟೆ ಜನಪ್ರತಿನಿಧಿಗಳಿಗೆ ನಾವು ಕಾಣುತ್ತೇವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಪೈಸಾರಿ ಜಾಗಕ್ಕೆ ಯೋಗ್ಯ ರಸ್ತೆ ಇಲ್ಲದಿರುವ ಬಗ್ಗೆ ತಾಲೂಕು ತಹಶೀಲ್ದಾರ್‍ರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಪರಿಣಾಮ ಸ್ಥಳ ಪರಿಶೀಲನೆ ಮತ್ತು ಸರ್ವೆ ಕಾರ್ಯ ನಡೆದಿತ್ತಾದರು, ಸಂಪರ್ಕ ರಸ್ತೆ ಸೌಲಭ್ಯ ದೊರಕಿಲ್ಲ. ಬದಲಾಗಿ ಇರುವ ಹಾದಿ ಮುಚ್ಚಲ್ಪಟ್ಟು ತೊದರೆ ಎದುರಿಸುವಂತಾಗಿದೆಯೆಂದು ನೊಂದು ನುಡಿದರು.

ಪೈಸಾರಿ ಜಾಗದ ಸುತ್ತಮುತ್ತ ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಇದನ್ನು ತೆರವು ಗೊಳಿಸಿ ಯೋಗ್ಯ ರಸ್ತೆ ನಿರ್ಮಿಸಿಕೊಡುವಂತೆ ಪೈಸಾರಿ ನಿವಾಸಿಗಳು ಆಗ್ರಹಿಸಿದರು. ಕುಡಿಯುವ ನೀರಿನ ಸೌಲಭ್ಯವು ಪೈಸಾರಿಯಲ್ಲಿ ಇಲ್ಲ, ನೀರಿಗಾಗಿ ಅಂದಾಜು ಅರ್ಧ ಕಿ.ಮೀ. ದೂರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪೈಸಾರಿ ನಿವಾಸಿಗಳಾದ ವಿ.ಕೆ. ಮಣಿ, ಆರ್. ರಮೇಶ್, ನಾಗಮ್ಮ ಹೆಚ್., ಸಿ.ಎಂ. ಸುದೇಶ್ ಹಾಗೂ ಕೆ.ವೈ. ಪ್ರಸಾದ್ ಉಪಸ್ಥಿತರಿದ್ದರು.