ಪೆರಾಜೆ, ಫೆ. 27: ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ ಪೆರಾಜೆ ಉತ್ತರ ಕೊಡಗು ಇದರ ಆಶ್ರಯದಲ್ಲಿ ಭಾ.ಜ.ಪ. ಆಡಳಿತ ರಜತ ಸಂಭ್ರಮ ಕಾರ್ಯಕ್ರಮವು ತಾ. 29ರಂದು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ. ಭಾರತೀಯ ಜನತಾ ಪಕ್ಷವು ಪೆರಾಜೆ ಗ್ರಾ.ಪಂ.ನಲ್ಲಿ ನಿರಂತರವಾಗಿ 25ವರ್ಷದ ಸುದೀರ್ಘ ಆಡಳಿತವನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬೆಳಿಗ್ಗೆ ನಾಸಿಕ್ ಬ್ಯಾಂಡ್ ಮತ್ತು ಕಾರ್ಯಕರ್ತರ ಬೈಕ್ ರ್ಯಾಲಿಯನ್ನು ಭಾಜಪ ಕೊಡಗು ಅಧ್ಯಕ್ಷ ರಾಬಿನ್ ದೇವಯ್ಯ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರದ ಅಧ್ಯಕ್ಷತೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಹಿಸಲಿ ದ್ದಾರೆ. ದಿಕ್ಸೂಚಿ ಭಾಷಣಕಾರರಾಗಿ ರಾ.ಸ್ವ.ಸಂ. ಮಂಗಳೂರು ವಿಭಾಗ ಕಾರ್ಯವಾಹ ನಾ ಸೀತಾರಾಮ ಆಗಮಿಸಲಿದ್ದಾರೆ. ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಗೌರವಾರ್ಪಣೆ ನೆರವೇರಿಸಲಿದ್ದಾರೆ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಬಾಂಡ್ ಗಣಪತಿ, ಮಡಿಕೇರಿ ಗ್ರಾಮಾಂತರ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಎನ್.ಸಿ. ಅನಂತ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಭಾಗವಹಿಸಲಿದ್ದಾರೆ.
ರಜತ ಸಂಭ್ರಮ ಕಾರ್ಯಕ್ರಮದ ವಿವರ ನೀಡಿದ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಶಾಸಕ ಕೆ.ಜಿ. ಬೋಪಯ್ಯ ಅವರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾರಲ್ಲದೆ, ಗ್ರಾಮದ ಬೇಡಿಕೆ ಕೊಟ್ಟರು ಅದನ್ನು ಪೂರೈಸುತ್ತಾರೆ ಎಂದು ತಿಳಿಸಿದರು.
ನಮ್ಮ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷವು 1993ರ ಚುನಾವಣೆಯ ನಂತರ ಆಡಳಿತಕ್ಕೆ ಬಂದಿತು. ಅಂದಿ ನಿಂದ ಇಂದಿನವರೆಗೂ ಗ್ರಾಮದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. 25 ವರ್ಷಗಳ ಸುದೀರ್ಘ ಕಾಲದ ಆಡಳಿತದಲ್ಲಿ ಗಾ.ಪಂ.ಗೆ ಸುಸಜ್ಜಿತ ಕಟ್ಟಡ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಿಲಯ, ಗ್ರಾಮದ ಎಲ್ಲಾ ಶಾಲೆಗಳಿಗೆ ಮೂಲಭೂತ ಅಗತ್ಯಗಳಾದ ಕಟ್ಟಡ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಒದಗಿಸಲಾಗಿದೆ. ನಮ್ಮ ಅಧಿಕಾರ ಅವದಿಯಲ್ಲಿ ಗ್ರಾಮವು ಹೆಚ್ಚಿನ ಅಭಿವೃದ್ಧಿ ಕಂಡಿದ್ದು ರಸ್ತೆ, ಕುಡಿಯುವ ನೀರು, ಗ್ರಂಥಾಲಯ, ವಸತಿ ಸೌಕರ್ಯ, ಸೇತುವೆ, ಶೌಚಾಲಯ, ಹೀಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ, ಗ್ರಾಮದ ಶೇ.96 ರಷ್ಟು ಮನೆಗಳಿಗೆ ವಿದ್ಯುತ್ ಸೌಕರ್ಯ ಆಗಿದ್ದು, ಉಳಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿದ್ದೇವೆ ಎಂದರು.
-ಕಿರಣ್ ಕುಂಬಳಚೇರಿ