ಗೋಣಿಕೊಪ್ಪಲು, ಫೆ. 27: ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಗೆ ಆಗಮಿಸಿದ ಮೈಸೂರಿನ ಚೀಫ್ ಇಂಜಿನಿಯರ್ ಜಿ.ಎಲ್. ಚಂದ್ರಶೇಖರ್‍ರವರನ್ನು ಚೇಂಬರ್‍ನ ಅಧ್ಯಕ್ಷರಾದ ಕಡೇಮಾಡ ಸುನೀಲ್ ಮಾದಪ್ಪ ಮುಂದಾಳತ್ವದಲ್ಲಿ ಭೇಟಿಯಾಗಿ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ವರ್ತಕರು ನಿರಂತರ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು.
ಇಲ್ಲಿಯ ವಿದ್ಯುತ್ ಸಮಸ್ಯೆ ಯಿಂದಾಗಿ ವರ್ತಕರು ದಿನ ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಯಿಂದಾಗಿ ವ್ಯಾಪಾರ ಕುಂಠಿತ ಗೊಂಡಿದೆ ಎಂದು ಕಡೇಮಾಡ ಸುನೀಲ್ ಮಾದಪ್ಪ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಕೂಡಲೇ ನಗರದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ನಗರವನ್ನು ಬಂದ್‍ಮಾಡುವ ಮೂಲಕ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪದಾಧಿಕಾರಿಗಳ ಅಹವಾಲು ಗಳನ್ನು ಆಲಿಸಿದ ಮೈಸೂರಿನ ಚೀಫ್ ಇಂಜಿನಿಯರ್ ಜಿ.ಎಲ್. ಚಂದ್ರಶೇಖರ್ ಇಲ್ಲಿಯ ಸಮಸ್ಯೆಯ ಬಗ್ಗೆ ಪರಿಶೀಲನೆಗೆ ಬಂದಿದ್ದೇನೆ. ನಗರದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಮುಂಜಾಗ್ರತ ಕ್ರಮ ವಹಿಸುತ್ತೇವೆ. ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು. ಸ್ಥಳದಲ್ಲಿದ್ದ ಎಇಇ ಅಂಕಯ್ಯ, ಇಂಜಿನಿಯರ್ ಮೋಹನ್ ಕುಮಾರ್ ಹಾಗೂ ಲೈನ್ ಮ್ಯಾನ್‍ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿಯ ಉಪಾಧ್ಯಕ್ಷರಾದ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ತೆಕ್ಕಡ ಕಾಶಿ, ನಿರ್ದೇಶಕರಾದ ಗಿರೀಶ್ ಗಣಪತಿ, ಕಿರಿಯಮಾಡ ಅರುಣ್ ಪೂಣಚ್ಚ, ಬಿ.ಎನ್. ಪ್ರಕಾಶ್, ಚೇಂದಂಡ ಸುಮಿ ಸುಬ್ಬಯ್ಯ, ಹೆಚ್.ವಿ. ಕೃಷ್ಣಪ್ಪ, ಬಿ.ಎನ್. ಪ್ರಕಾಶ್, ಪ್ರಭಾಕರ್ ನೆಲ್ಲಿತ್ತಾಯ, ರಾಜಶೇಖರ್, ಕೇಶವ್ ಕಾಮತ್, ಆಲೀರ ಕೆ.ಉಮ್ಮರ್, ಮುಂತಾದವರು ಉಪಸ್ಥಿತರಿದ್ದರು.