ಮಡಿಕೇರಿ, ಫೆ. 27 : ಎಸ್‍ಎಸ್‍ಎಲ್‍ಸಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ‘ಕೊಡಗು ವಿಕಸನ’ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ತಾ.29ರಂದು ನಾಪೋಕ್ಲು ಹಾಗೂ ಮಡಿಕೇರಿಯಲ್ಲಿ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ವಿಕಸನ ಸಂಸ್ಥೆಯ ಸಂಚಾಲಕ ಚೆಯ್ಯಂಡ ಸತ್ಯ ಹಾಗೂ ಸದಸ್ಯ ಕಿಶೋರ್ ರೈ ಕತ್ತಲೆಕಾಡು ಅವರುಗಳು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ರೀಡಾಪಟು ಅರ್ಜುನ್ ದೇವಯ್ಯ ಹಾಗೂ ಬೆಂಗಳೂರಿನ ವಿಷಯ ತಜ್ಞರ ಮೂಲಕ ಕಳೆದ ಒಂದು ತಿಂಗಳಿನಿಂದ ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ಸುಮಾರು 3500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಈ ಶಿಬಿರದ ಸಮಾರೋಪ ಸಮಾರಂಭ ತಾ. 29ರಂದು ಪೂರ್ವಾಹ್ನ 10 ಗಂಟೆಗೆ ನಾಪೋಕ್ಲು ಕೊಡವ ಸಮಾಜ ಹಾಗೂ ಅಪರಾಹ್ನ 2 ಗಂಟೆಗೆ ಮಡಿಕೇರಿಯ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಸ್ವತಃ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.

ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಬೆಂಗಳೂರಿನಲ್ಲಿ ವಿಕಸನ ಎಂಬ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರು ವುದರಿಂದ ಪ್ರೇರೇಪಣೆಗೊಂಡು ಕೊಡಗಿನ ಕೆಲವು ಮಂದಿ ಸೇರಿ ಕೊಡಗು ವಿಕಸನ ಸಂಸ್ಥೆಯನ್ನು ಜ.11ರಂದು ಅಧಿಕೃತವಾಗಿ ಆರಂಭಿಸಿದ್ದು, ಮೊದಲ ಹಂತವಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಕ್ರೀಡಾಪಟು ಅರ್ಜುನ್ ದೇವಯ್ಯ ಅವರ ಮೂಲಕ ಮಾಡಲಾಗಿದೆ. ಇದರೊಂದಿಗೆ ಪ್ರತಿ ಶನಿವಾರ ಬೆಂಗಳೂರಿನಿಂದ ವಿವಿಧ ವಿಷಯಗಳ ತಜ್ಞರನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲಾಗಿದೆ. ವಿಶೇಷವಾಗಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧೆಡೆಯ ವಿದ್ಯಾಸಂಸ್ಥೆಗಳಿಂದ ಉತ್ತಮ ಸ್ಪಂದನ ದೊರಕಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯ ಸಂಚಾಲಕಿ ಸಿಸ್ಟರ್ ಅಂತೋಣಿಯಮ್ಮ ಹಾಗೂ ಮುಖ್ಯೋಪಾಧ್ಯಾಯಿನಿ ರೋಸಾ ಮೆಂಡೋನ್ಸ ಉಪಸ್ಥಿತರಿದ್ದರು.