ಗೋಣಿಕೊಪ್ಪಲು, ಫೆ. 27: ದ.ಕೊಡಗಿನಲ್ಲಿ ನಿರಂತರ ವಿದ್ಯುತ್ ನಿಲುಗಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಗೋಣಿಕೊಪ್ಪ ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಲಾಯಿತು. ಮುಂಜಾನೆಯಿಂದಲೇ ದ.ಕೊಡಗಿನ ಬಾಳೆಲೆ, ಶ್ರೀಮಂಗಲ,ಹುದಿಕೇರಿ, ಹಾಗೂ ಪೊನ್ನಂಪೇಟೆ ಹೋಬಳಿಯ ವಿವಿಧ ಗ್ರಾಮಗಳಿಂದ ತಂಡೋಪ ತಂಡವಾಗಿ ಆಗಮಿಸಿದ ರೈತರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಇಲಾಖಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಆಕ್ರೋಶಗೊಂಡು ತಕ್ಷಣದಿಂದಲೇ. ಸಮರ್ಪಕ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಚೆಸ್ಕಾ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಇದೇ ಸಂದರ್ಭ ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೆಲ ಕಾಲ ರೈತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿಯ ಮುಂಭಾಗದ ಪ್ರತಿಭಟನಾ ಸ್ಥಳಕ್ಕೆ ಚೆಸ್ಕಾಂನ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಮನುಸೋಮಯ್ಯ ಕರೆ ನೀಡಿದರು. ಈ ಸಂದರ್ಭ ಚೆಸ್ಕಾಂನ ಚೀಫ್ ಇಂಜಿನಿಯರ್ ಜಿ.ಎಲ್.ಚಂದ್ರಶೇಖರ್ ಮೈಸೂರು, ಕೊಡಗು ವೃತ್ತದ ಸೂಪರಿಡೆಂಟ್ ಇಂಜಿನಿಯರಿಂಗ್ ಮಹದೇವ್ ಸ್ವಾಮಿ ಕೆಪಿಟಿಸಿಎಲ್‍ನ ಮುಖ್ಯ ಅಧಿಕಾರಿ ಮಾದೇಶ್, ಮಡಿಕೇರಿಯ ಚೆಸ್ಕಾಂ ಹಿರಿಯ ಅಧಿಕಾರಿ ಇ.ಇ. ಸೋಮಶೇಖರ್, ಗೋಣಿಕೊಪ್ಪ ಚೆಸ್ಕಾಂನ ಎಇಇ ಅಂಕಯ್ಯ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿ ದ್ದಂತೆಯೇ ರೈತ ಮುಖಂಡರು ಘೋಷಣೆಗಳನ್ನು ಕೂಗುತ್ತ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಎಇಇ ಅಂಕಯ್ಯ ಅವರನ್ನು ವಿದ್ಯುತ್ ಸಮಸ್ಯೆಯ ಬಗ್ಗೆ ವಿವರ ನೀಡಿ ಎಂದು ಒತ್ತಾಯಿಸುತ್ತಿರುವಾಗಲೇ ಇವರನ್ನು ತಕ್ಷಣ ವರ್ಗಾಯಿಸುವಂತೆ ರೈತ ಮುಖಂಡರು ಆಗ್ರಹಿಸಿದರು. ಅಧಿಕಾರಿಗಳ ಮುಂದೆ ಪ್ರಶ್ನೆಗಳ ಸುರಿಮಳೆಗೈದರು.

ವಾರ್ಷಿಕವಾಗಿ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಇಲ್ಲಿಯ ರೈತ ತಾನು ಅವಲಂಭಿಸಿರುವ ಕಾಫಿ ಬೆಳೆಗೆ ನೀರನ್ನು ಹಾಯಿಸಲು ಮಾತ್ರ ವಿದ್ಯುತ್ ಕೇಳುತ್ತಾನೆ. ಈ ವಿದ್ಯುತ್‍ನಿಂದ ರೈತರ ಬದುಕು ನಿಂತಿದೆ. ವಿದ್ಯುತ್ ನೀಡಬೇಕಾದ ಇಲಾಖೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಬಗ್ಗೆ ಮನುಸೋಮಯ್ಯ ಅಧಿಕಾರಿಗಳ ಗಮನ ಸೆಳೆದರು. ದ.ಕೊಡಗಿನಲ್ಲಿ ವಿದ್ಯುತ್ ಸಮಸ್ಯೆಯಿಂದ ನಿರಂತರ ತೊಂದರೆ ಎದುರಿಸುತ್ತಿರುವ ಬಗ್ಗೆ ರೈತ ಮುಖಂಡರಾದ ಪುಚ್ಚಿಮಾಡ ಅಶೋಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಹಾರಿಕೆಯ ಉತ್ತರ ನಮಗೆ ಬೇಕಾಗಿಲ್ಲ. ಸಮರ್ಪಕ ವಿದ್ಯುತ್ ನೀಡುವ ಬಗ್ಗೆ ಮಾತ್ರ ಉತ್ತರಿಸಿ ಎಂದು ಪಟ್ಟು ಹಿಡಿದರು.ಬಿಸಿಲಿನ ಬೇಗೆಯ ನಡುವೆ ರೈತರು ರಸ್ತೆಯಲ್ಲಿಯೇ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡುವಂತಾಯಿತು.

ಚೆಸ್ಕಾಂ ಇಲಾಖೆಗೆ ಸಂಪೂರ್ಣ ಅರಿವಿದ್ದರೂ ದ.ಕೊಡಗಿನಲ್ಲಿ ಉದ್ದೇಶಪೂರ್ವಕವಾಗಿ ರೈತರಿಗೆ ತೊಂದರೆ ನೀಡಲು ಬಾಳೆಲೆ ಹೋಬಳಿಯಲ್ಲಿ ವಿದ್ಯುತ್ ಕೇಬಲ್ ಕೆಲಸ ಕೈಗೆತ್ತಿಕೊಂಡಿದ್ದು ಸರಿಯಲ್ಲ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರೈತನಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಇಲ್ಲಿಯ ಅಧಿಕಾರಿಗಳೇ ನೇರ ಹೊಣೆ ಎಂದು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಹೇಳಿದರು. ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ರೈತರನ್ನು ಕಚೇರಿಯ ಒಳಗೆ ಬರಮಾಡಿಕೊಂಡು ವಿವಿಧ ಭಾಗದ ರೈತರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ರೈತ ಮುಖಂಡರಾದ ನಲ್ಲೂರಿನ ಸುಜಯ್ ಬೋಪಯ್ಯ, ಹುದಿಕೇರಿಯ ಚಕ್ಕೇರ ವಾಸು ಕುಟ್ಟಪ್ಪ,ಬಿರುನಾಣಿಯ ಕರ್ತಮಾಡ ಸುಜು ಪೊನ್ನಪ್ಪ, ಕಿರುಗೂರಿನ ಚೆಪ್ಪುಡೀರ ಕುಟ್ಟಪ್ಪ,ತಿತಿಮತಿಯ ಚೆಪ್ಪುಡೀರ ಕಾರ್ಯಪ್ಪ, ಟಿ. ಶೆಟ್ಟಿಗೇರಿಯ ಅಪ್ಪಚಂಗಡ ಮೋಟಯ್ಯ, ಶ್ರೀಮಂಗಲದ ಅಜ್ಜಮಾಡ ಚಂಗಪ್ಪ,ನಲ್ಲೂರಿನ ಪುಚ್ಚಿಮಾಡ ಲಾಲಾ ಪೂಣಚ್ಚ ಸೇರಿದಂತೆ ಅನೇಕ ಭಾಗದ ರೈತ ಮುಖಂಡರು ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಪ್ರತಿಭಟನೆಯಲ್ಲಿ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಜಿ ಇಟ್ಟಿರ ಸಭಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್,ಅಮ್ಮತ್ತಿ ಹೋಬಳಿ ಸಂಚಾಲಕ,ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ತಾಲೂಕು ಸಂಚಾಲಕ ಬಾಚಮಾಡ ಭವಿ ಕುಮಾರ್,ಮಾಯಮುಡಿಯ ಪುಚ್ಚಿಮಾಡ ರಾಯ್ ಮಾದಪ್ಪ,ಚೆಸ್ಕಾಂ ಅಧಿಕಾರಿಗಳಾದ ಸುರೇಶ್, ಸೇರಿದಂತೆ ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ತೀತರಮಾಡ ರಾಜ, ಮರಿಸ್ವಾಮಿ, ಜಗದೀಶ್, ಬೋಡಂಗಡ ಅಶೋಕ್, ಅಳಮೇಯಂಗಡ ಬೋಸ್, ಸುರೇಶ್ ಸುಬ್ಬಯ್ಯ, ಕಾಡ್ಯಮಾಡ ಉದಯ್, ಚಕ್ಕೇರ ಸೂರ್ಯ ಮುಂತಾದವರು ಹಾಜರಿದ್ದರು. ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿ, ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಖ್ಯಾತೆಗೌಡ ಮುಂದಾಳತ್ವದಲ್ಲಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು. ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್, ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

-ಚಿತ್ರ ವರದಿ, ಹೆಚ್.ಕೆ.ಜಗದೀಶ್