ಮಡಿಕೇರಿ, ಫೆ. 27: ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ, ಆದಿಚುಂಚನಗಿರಿ, ನಾಗಮಂಗಲ ತಾಲೂಕು ಮಂಡ್ಯ ಜಿಲ್ಲೆ ಇಲ್ಲಿ 2019-20ನೇ ಸಾಲಿನ ಇನ್‍ಸ್ಪೈರ್ ಮಾನಕ್ ಅವಾರ್ಡ್ ರಾಜ್ಯ ಹಂತದ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ತಾಲೂಕಿನ ಒಟ್ಟು 14 ವಿದ್ಯಾರ್ಥಿಗಳ ಪೈಕಿ ರಾಷ್ಟ್ರಮಟ್ಟಕ್ಕೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ತಿಳಿಸಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂತ ಮೈಕಲರ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿ ಜೊಯಲ್ ಜಾರ್ಜ್ “ಸ್ಮಾರ್ಟ್ ಡ್ರೈವಿಂಗ್ ಲೈಟ್” ವಿಧಾನದಿಂದ ರಾತ್ರಿ ವೇಳೆಯಲ್ಲಿ ಪ್ರಯಾಣದಲ್ಲಿರುವ ವಾಹನದ ಚಾಲಕನಿಗೆ ಎದುರಿನಿಂದ ಬರುವ ವಾಹನಗಳ ಹೆಡ್‍ಲೈಟ್‍ನ ಬೆಳಕಿನ ತೀವ್ರತೆಯನ್ನು ಸ್ವತಃ ಕಡಿಮೆ ಖರ್ಚಿನಲ್ಲಿ ಯಾವ ರೀತಿ ಸಿದ್ಧಪಡಿಸಿಕೊಳ್ಳಬಹುದು ಮತ್ತು ಜ್ಞಾನೋದಯ ಆಂಗ್ಲ ಮಾಧ್ಯಮ ಕೋರಂಗಾಲ ಶಾಲಾ 10ನೇ ತರಗತಿ ವಿದ್ಯಾರ್ಥಿ ಬಿ.ಎಸ್. ಸೃಜನ್ “ಸೆನ್ಸರ್ ಅಂಬ್ರಲ್ಲಾ” ವಿಧಾನದಿಂದ ಜನರು ಬಿಸಿಲಿನಲ್ಲಿ ಒಣಹಾಕಿದ ಆಹಾರ ಧಾನ್ಯಗಳನ್ನು, ಸಂತೆ ವ್ಯಾಪಾರಿಗಳು ಮಾರಾಟದ ವಸ್ತುಗಳನ್ನು ತಕ್ಷಣದ ಅವಧಿಯಲ್ಲಿ ಬರುವ ಮಳೆಯಿಂದ ಹೇಗೆ ರಕ್ಷಿಸಬಹುದು ಎಂಬ ಉತ್ತವ ಅಂಶವನ್ನು ಒಳಗೊಂಡಿತು.