ಮಡಿಕೇರಿ, ಫೆ. 27: ಮಾಕುಟ್ಟ ವಲಯ ಅರಣ್ಯ ಇಲಾಖಾ ಸಿಬ್ಬಂದಿಗಳು ಲಾರಿ ಸಹಿತವಾಗಿ ಕಳೆದೆರಡು ದಿನಗಳ ಹಿಂದೆ ವಶಪಡಿಸಿ ಕೊಂಡಿರುವ ಬೃಹತ್ ಗಾತ್ರದ ಭಾರೀ ಮೌಲ್ಯದ ಮರದ ನಾಟಾಗಳನ್ನು ಇದೀಗ ತಿತಿಮತಿ ಅರಣ್ಯ ಡಿಪೋಕ್ಕೆ ಸಾಗಿಸಲಾಗಿದೆ. ಇಲಾಖಾ ಸಿಬ್ಬಂದಿಗಳು ಮಾಕುಟ್ಟ ಗೇಟ್‍ನಲ್ಲಿ ನಡೆಸಿದ ತಪಾಸಣೆಯ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಕೆ.ಎಲ್. 10 ಆರ್ 7630 ಸಂಖ್ಯೆಯ ಲಾರಿ ತಲಚೇರಿಯ ಜನಾರ್ಧನ್ ಎಂಬವರಿಗೆ ಸೇರಿದ್ದಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಕಾಫಿ ಹಸ್ಕ್ ಅನ್ನು ಮೇಲ್ಭಾದಲ್ಲಿ ತುಂಬಿ ಒಳಭಾಗದಲ್ಲಿ ಹೆಬ್ಬಲಸು ಹಾಗೂ ಹಲಸಿನ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಸಂದರ್ಭ ಈ ಅಕ್ರಮ ಬೆಳಕಿಗೆ ಬಂದಿತ್ತು. ಇಲಾಖಾ ಸಿಬ್ಬಂದಿಗಳು ಗೇಟ್‍ನಲ್ಲಿ ವಾಹನ ತಪಾಸಣೆಗೆ ಮುಂದಾದಾಗ ಕಾಫಿ ಹಸ್ಕ್ ಎಂದು ಹೇಳಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ಬಳಿಕ ಲಾರಿಯಿಂದ ಇಳಿದು ಕತ್ತಲೆಯಲ್ಲಿ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ. ಲಾರಿ ಹಾಗೂ ಮರದ ಮೌಲ್ಯ ರೂ. 10 ಲಕ್ಷಕ್ಕೂ ಅಧಿಕ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಮಾಕುಟ್ಟ ವಲಯ ಅರಣ್ಯಾಧಿಕಾರಿ ಪರದಂಡ ಅರುಣ್‍ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಉಮೇಶ್, ಹನೀಫ್, ಸಿಬ್ಬಂದಿಗಳಾದ ರಾಘವೇಂದ್ರ, ಜಯಕುಮಾರ್, ಕೆ.ಆರ್. ರಮೇಶ್ ಈ ಕಾರ್ಯಾಚರಣೆ ನಡೆಸಿದ್ದರು ಎಂದು ಎ.ಸಿ.ಎಫ್. ರೋಶನಿ ಅವರು ಮಾಹಿತಿ ನೀಡಿದ್ದಾರೆ.