ಮಡಿಕೇರಿ, ಫೆ. 26: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವುದೇ ಮಹಿಳಾ ಶೋಷಣೆಗೆ ನೀಡುವ ಉತ್ತರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್. ಅರುಂಧತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ನಡೆದ ಕೌಶಲ್ಯಾಧಾರಿತ ತರಬೇತಿಯ ಸಮಾರೋಪ ಸಮಾರಂಭ ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗ ಬೇಕು. ಈ ನಿಟ್ಟಿನಲ್ಲಿ ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ಉತ್ತಮ ಕಾರ್ಯಕ್ರಮ ರೂಪಿಸಿದೆ. ಮಹಿಳಾ ಸ್ವಾವಲಂಬನೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ರುವುದು ಸಂತಸದ ವಿಷಯ ಎಂದರು.

ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಬಾರ್ಡ್ ಬಡ ಜನರ ಮಹಿಳೆಯರ ಮತ್ತು ಕೃಷಿಕರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಎಲ್‍ಇಡಿಪಿ ಕಾರ್ಯಕ್ರಮದಡಿ ಮಹಿಳೆಯರಿಗೆ ಹೊಲಿಗೆ ಮತ್ತು ವಿನ್ಯಾಸಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.

ಕೊಡಗು ಜಿಲ್ಲೆ ನೆರೆ ಹಾವಳಿಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದೆ. ಹಿಂದೆ ಮಹಿಳೆಯರು ಯಾವುದೇ ಉದ್ದಿಮೆ ನಿರ್ವಹಿಸಲು ಅವಕಾಶಗಳೂ ಸಹ ಕಡಿಮೆ ಇತ್ತು. ಈಗ ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ವತಿಯಿಂದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಬಗ್ಗೆ ವಿವಿಧ ತರಬೇತಿ ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ. ಈ ಅವಕಾಶ ಬಳಸಿಕೊಳ್ಳು ವಂತಾಗಬೇಕು ತಿಳಿಸಿದರು.

ಒಡಿಪಿ ಸಂಸ್ಥೆಯ ನಿರ್ದೇಶಕ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೆರಾ ಅವರು, ಕಳೆದ ಅನೇಕ ವರ್ಷಗಳಿಂದ ಒಡಿಪಿ ಸಂಸ್ಥೆಯು ನಬಾರ್ಡ್‍ನ ಸಹಭಾಗಿತ್ವದಲ್ಲಿ ಮಹಿಳೆಯರು, ಬಡವರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು ಭಾಗಗಳಲ್ಲಿ ಈ ಸಂಸ್ಥೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಮಹಿಳಾ ಸಬಲೀಕರಣದ ಕಾರ್ಯಕ್ರಮ ರೂಪಿಸುತ್ತಾ ಬಂದಿದೆ. ಮಹಿಳೆಯರೂ ಸಹ ಸ್ವ-ಉದ್ಯೋಗ ಪಡೆಯು ವಂತಾಗಲಿ ಎಂಬ ಆಶಯದೊಂದಿಗೆ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಟ್ಟರಾಜು ಅವರು, ಇಲಾಖೆ ವತಿಯಿಂದ ಇರುವ ಯೋಜನೆಗಳ ಬಗ್ಗೆ ಮಹಿಳಾ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂಧರ್ಭ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬಾನು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕರುಣಾಕರ್, ಸಂತ ಮೈಕಲರ ಶಾಲೆಯ ಆಡಳಿತಾಧಿಕಾರಿಗಳಾದ ಫಾದರ್ ನವೀನ್, ಒಡಿಪಿ ಯೋಜನಾ ಸಂಯೋಜಕಿ ಲಲಿತ ಜಾನ್ ಸೇರಿದಂತೆ ಇತರರು ಇದ್ದರು.

ಒಡಿಪಿ ಸಂಸ್ಥೆಯ ಕೊಡಗು ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ ನಿರೂಪಿಸಿದರು, ಮಹಿಳಾಭಿವೃದ್ಧಿ ಯೋಜನಾ ಸಂಯೋಜಕರಾದ ಮೋಲಿ ಪುಡ್ತಾದೊ ಸ್ವಾಗತಿಸಿದರು. ಶಿಬಿರಾರ್ಥಿಗಳು ಮತ್ತು ಸಂಸ್ಥೆಯ ಸದಸ್ಯರು ಪ್ರಾರ್ಥಿಸಿದರು.