ಸೋಮವಾರಪೇಟೆ, ಫೆ. 26: ರೋಟರಿ ಬೆಂಗಳೂರು ಸೆಂಟ್ರಲ್ ವತಿಯಿಂದ ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳನ್ನು ನೀಡ ಲಾಯಿತು. ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರು ರೋಟರಿ ಸದಸ್ಯ ನಾಗಭೂಷಣ್ ಶುಂಠಿ ಅವರು ಉದ್ಘಾಟಿಸಿದರು.

ಶಾಲೆಯ ನಲಿ-ಕಲಿ ಮಕ್ಕಳಿಗೆ ಪೀಠೋಪಕರಣಗಳನ್ನು ರೋಟರಿ ಅಧ್ಯಕ್ಷ ಅರುಣ್ ಕುಮಾರ್ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಕೆಲ ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಸರ್ಕಾರ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಯೋಜನೆಗಳನ್ನು ರೂಪಿಸಬೇಕು. ರೋಟರಿ ಸಂಸ್ಥೆ ಗ್ರಾಮೀಣ ಶಾಲೆಗೆ ಕೈಲಾದ ಸಹಾಯವನ್ನು ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಶಾರೀರಿಕ ಕವಾಯತು, ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ನಿವೃತ್ತ ಮುಖ್ಯೋಪಾಧ್ಯಾಯ ಹೆಚ್.ಕೆ. ಕೊಮಾರಿಗೌಡ, ರೋಟರಿ ಅಧ್ಯಕ್ಷ ಅರುಣ್ ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸೋಮವಾರಪೇಟೆ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಕಾರ್ಯದರ್ಶಿ ಲೋಕೇಶ್, ಮಾಜಿ ಅಧ್ಯಕ್ಷ ಪಿ.ಕೆ. ರವಿ, ಗೌಡಳ್ಳಿ ಕೃ.ಪ.ಸ. ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ರೋಟರಿ ಪದಾಧಿಕಾರಿಗಳಾದ ಎ.ಪಿ. ವೀರರಾಜು, ಪ್ರಕಾಶ್, ಬೆಂಗಳೂರು ರೋಟರಿ ಕಾರ್ಯದರ್ಶಿ ರಾಜೇಶ್, ವಿನೋದ್, ಶಾಲಾ ಮುಖ್ಯ ಶಿಕ್ಷಕ ಮಂಜಯ್ಯ ಇದ್ದರು. ಶಿಕ್ಷಕಿ ಆಶಾ ಕಾರ್ಯಕ್ರಮ ನಿರ್ವಹಿಸಿದರು.