ಕುಶಾಲನಗರ, ಫೆ. 25: ಕೊಡಗಿನಲ್ಲಿ ಕುಶಾಲನಗರ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ವ್ಯಾವಹಾರಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಮುಂತಾದ ಕಾರಣಗಳಿಂದ ವಾಹನಗಳ ಸಂಖ್ಯೆ ಹೆಚ್ಚುತ್ತಲಿವೆ. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಟ್ರಾಫಿಕ್ ಸಮಸ್ಯೆಗಳು ಕೂಡಾ ಹೆಚ್ಚುತ್ತಲಿವೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಸಂಬಂಧಪಟ್ಟ ಸಂಚಾರಿ ಪೊಲೀಸರು ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು ಎಂಬದು ಕುಶಾಲನಗರ ಜನತೆಯ ಆಗ್ರಹವಾಗಿದೆ.
ವಾಹನ ದಟ್ಟಣೆ ನಿಯಂತ್ರಣ ಕ್ಕಾಗಿ ಸಿಗ್ನಲ್ ಲೈಟನ್ನು ಕೊಡಗಿನಲ್ಲಿ ಪ್ರಥಮ ಬಾರಿಗೆ ಕುಶಾಲನಗರದಲ್ಲಿ ಅಳವಡಿಸಲಾಯಿತು. ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರಾರಂಭದಲ್ಲಿ ಸಿಗ್ನಲ್ ಲೈಟ್‍ಗೆ ಹೊಂದಿಕೊಳ್ಳಲು ಕಷ್ಟವಾಯಿ ತಾದರೂ, ದಿನಗಳು ಕಳೆದಂತೆ ಸಿಗ್ನಲ್ ಲೈಟ್ ಸಾಮಾನ್ಯವಾಗಿಬಿಟ್ಟಿದೆ.
ಸಿಗ್ನಲ್ ಲೈಟ್‍ನ ತಾಂತ್ರಿಕ ದೋಷಗಳಿಂದಾಗಿ ವಾಹನ ಸವಾರರಿಗೆ ಭಾರೀ ತೊಂದರೆ ಯುಂಟಾಗಿದ್ದು, ತಾಂತ್ರಿಕದೋಷವನ್ನು ಸರಿಪಡಿಸುವುದು ಅತ್ಯವಶ್ಯಕವಾಗಿದೆ.
ಮೈಸೂರು ರಸ್ತೆಯಿಂದ ಮಡಿಕೇರಿಯೆಡೆಗೆ ತೆರಳುವ ರಸ್ತೆಯ ಸಿಗ್ನಲ್ ಹಾಗೂ ಮಡಿಕೇರಿ ರಸ್ತೆಯಿಂದ ಮೈಸೂರಿನೆಡೆಗೆ ತೆರಳುವ ರಸ್ತೆ ಸಿಗ್ನಲ್‍ಗಳ ನಡುವೆ ಕೇವಲ ಎಂಟು ಸೆಕೆಂಡುಗಳ ವ್ಯತ್ಯಾಸವಿದ್ದು, ಮೈಸೂರು ರಸ್ತೆಯಿಂದ ರಥಬೀದಿಗೆ ತೆರಳುವ ವಾಹನ ಸವಾರರು ಎರಡೂ ಬದಿಯ ವಾಹನಗಳು ಸಂಪೂರ್ಣ ವಾಗಿ ತೆರಳುವವರೆಗೆ ಕಾದು ನಿಲ್ಲಬೇಕಿದೆ. ಅಷ್ಟರಲ್ಲಿ ಮತ್ತೊಂದು ಸಿಗ್ನಲ್ ಬಿದ್ದು, ಟ್ರಾಫಿಕ್ ಸಮಸ್ಯೆ ಉದ್ಭವವಾಗುತ್ತವೆ. ಕೆಲವೊಮ್ಮೆ ವಾಹನ ಸವಾರರು ಆತುರದಿಂದ ವಾಹನವನ್ನು ತಿರುಗಿಸಲು ಮುಂದಾಗಿ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ.
ವಾರದ ಅಂತ್ಯದಲ್ಲಿ ಪ್ರವಾಸಿಗರ ವಾಹನಗಳು ಹೆಚ್ಚಾಗಿ ಕೊಡಗಿನತ್ತ ಬರುವುದರಿಂದ ಸರ್ಕಲ್‍ನಿಂದ ಹಿಡಿದು ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ ವಾಹನಗಳು ಸಾಲಾಗಿ ನಿಂತಿರುತ್ತವೆ. ಮಡಿಕೇರಿ ರಸ್ತೆಯ ಸಿಗ್ನಲ್‍ನ ಸಮಯ 60 ಸೆಕೆಂಡುಗಳು ಮಾತ್ರ ಇರುವುದರಿಂದ ಸರ್ಕಾರಿ ಶಾಲೆಯ ಬಳಿ ನಿಂತಿರುವ ವಾಹನಗಳು ಎರಡನೇ ಸಿಗ್ನಲ್ ಬೀಳುವ ತನಕ ಕಾಯಬೇಕಿದೆ.
ಇದರಂತೆ ಅಯ್ಯಪ್ಪ ಸ್ವಾಮಿ ದೇವಾಲಯದ ರಸ್ತೆಯ ಸಿಗ್ನಲ್ ಹಾಗೂ ಲಾರಿ ನಿಲ್ದಾಣದ ರಸ್ತೆಯ ಸಿಗ್ನಲ್‍ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಬೇಕಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್, ಸಿಗ್ನಲ್ ಲೈಟ್‍ನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ ತಾಂತ್ರಿಕ ದೋಷ ನಿವಾರಣೆಗೆ ಮುಂದಾಗ ಬೇಕಾಗಿದೆ. ಈ ಬಗ್ಗೆ ಸಿಗ್ನಲ್ ಅಳವಡಿಕೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಕುಶಾಲನಗರದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೊಂಚ ಮಟ್ಟದಲ್ಲಿ ಸುಧಾರಣೆ ಕಂಡಿರುವುದು ಸ್ವಾಗತಾರ್ಹ. ಆದರೂ ಪಟ್ಟಣದ ಕೆಲವೆಡೆ ಪಾರ್ಕಿಂಗ್ ಸಮಸ್ಯೆ ಆಗಾಗ ನಿರ್ಮಾಣವಾಗುತ್ತಿದ್ದು, ಇದರ ಬಗ್ಗೆ ಸಂಚಾರಿ ಪೊಲೀಸರು ಗಮನ ಹರಿಸಬೇಕಾಗಿದೆ ಎಂದಿದ್ದಾರೆ.
- ಕೆ.ಬಿ. ಶಂಶುದ್ಧೀನ್.