ಪಾಲಿಬೆಟ್ಟ,ಫೆ. 25: ಇಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರು ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ವೈದ್ಯರು ಚಿಕಿತ್ಸೆ ನೀಡುವ ಕೋಣೆಯಲ್ಲಿ ಪಾಚಿ ಕಟ್ಟಿಕೊಂಡಿರುತ್ತದೆ. ಇದರಿಂದ ಅಸ್ತಮಾ ರೋಗ ಬರುವ ಸಂಭವವಿದೆ ಎಂದು ವೈದ್ಯರೇ ಹೇಳುತ್ತಿದ್ದಾರೆ. ಈ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಮತ್ತೊಂದು ರೋಗ ಅಸ್ತಮಾ ಕಾಣಿಸಿಕೊಳ್ಳುವ ಸಂಭವವಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಆಸ್ಪತ್ರೆಯ ಗೋಡೆಗಳನ್ನು ಶುಚಿತ್ವಗೊಳಿಸಿ ಸುಣ್ಣಬಣ್ಣ ಕೊಡಿಸಿ ಮತ್ತೊಂದು ರೋಗದಿಂದ ತಪ್ಪಿಸಬೇಕಾಗಿದೆ.

ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಷ್ಟೋ ವರ್ಷಗಳಿಂದ ಸುಣ್ಣ ಬಣ್ಣ ಕಂಡಿರುವುದಿಲ್ಲ. ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಇದೇ ಆಸ್ಪತ್ರೆಯನ್ನೇ ಅವಲಂಬಿಸಿರುತ್ತಾರೆ. ಡಾ.ವೀಣಾರವರು ಎಲ್ಲಾ ರೋಗದ ರೋಗಿಗಳನ್ನು ಚಿಕಿತ್ಸೆ ನೀಡುವುದರೊಂದಿಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

ಸುಮಾರು 5ವರ್ಷಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿತ್ತು. ಪ್ರಯೋಗಾಲಯ, ಕ್ಷ-ಕಿರಣ ಇದೆಲ್ಲವೂ ರೋಗಿಗಳಿಗೆ ಪ್ರಯೋಜನವಾಗುತ್ತಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ತಂತ್ರಜ್ಞರಿಲ್ಲದೆ ಯಂತ್ರೋಪಕರಣಗಳು ಮೂಲೆ ಸೇರಿವೆ. 7 ದಾದಿಗಳು ಸೇವೆ ಸಲ್ಲಿಸಬೇಕಾದಲ್ಲಿ 3 ದಾದಿಗಳು ದಿನಕ್ಕೊಬ್ಬರು ಸೇವೆ ಸಲ್ಲಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಅದರಲ್ಲಿ ಒಬ್ಬರು ರಜೆ ಹೋದಲ್ಲಿ ಹಗಲು ರಾತ್ರಿ ಒಬ್ಬರೇ ಕೆಲಸ ಮಾಡುವ ಪರಿಸ್ಥಿತಿ ಕಂಡುಬರುತ್ತಿದೆ. ಸಂಬಂಧಪಟ್ಟವರು ಈ ಎಲ್ಲಾ ವಿಚಾರಕ್ಕೆ ಮೂಲ ಸೌಕರ್ಯವನ್ನು ಕಲ್ಪಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಿಶೇಷ ವರದಿ: ಪುತ್ತಂ ಪ್ರದೀಪ್