ಗೋಣಿಕೊಪ್ಪ ವರದಿ, ಫೆ. 25 : ವಿದ್ಯುತ್ ಸರಬರಾಜಿನಲ್ಲಿ ನಿರಂತರ ವ್ಯತ್ಯಯ ಎದುರಿಸುತ್ತಿರುವ ಬೆಳೆಗಾರರ ಪರವಾಗಿ ಕೊಡಗು ರೈತ ಸಂಘದ ವತಿಯಿಂದ ತಾ. 27 ರಂದು ಗೋಣಿಕೊಪ್ಪ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ತಿಳಿಸಿದ್ದಾರೆ.

ಕಾಫಿ ಹೂ ಬಿಡುವ ಸಮಯವಾಗಿರುವುದರಿಂದ ನೀರು ಹಾಯಿಸಲು ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ನೀಡಲು ಸೆಸ್ಕ್ ವಿಫಲವಾಗಿದ್ದು, ಸೆಸ್ಕ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಸೂಕ್ತ ಭರವಸೆ ದೊರೆಯುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಪ್ರತಿಭಟನೆಯಲ್ಲಿ ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಹಾಗೂ ಅಮ್ಮತ್ತಿ ಹೋಬಳಿಗಳ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ. ಸಂಚಾಲಕ ಪುಚ್ಚಿಮಾಡ ಸುಭಾಶ್ ಮಾತನಾಡಿ, ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಸಲುವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಸಂಚಾಲಕ ಬಾಚಮಾಡ ಭವಿಕುಮಾರ್ ಮಾತನಾಡಿ, ಶ್ರೀಮಂಗಲ ಕೇಂದ್ರವನ್ನು 63 ಕೆ.ವಿ ಗೆ ಮೇಲ್ದರ್ಜೆಗೇರಿಸಲು ಆದೇಶ ಇದ್ದರೂ ಕೂಡ ಪಾಲನೆಯಾಗುತ್ತಿಲ್ಲ. ಸಮಸ್ಯೆ ನಿರಂತರ ಎದುರಿಸು ವಂತಾಗಿದೆ ಎಂದರು. ಗೋಷ್ಠಿಯಲ್ಲಿ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಕಾರ್ಯಕರ್ತ ತೀತರಮಾಡ ರಾಜ ಇದ್ದರು.