ಪೆರಾಜೆ, ಫೆ. 25: ಬಿಜೆಪಿ ಗ್ರಾಮ ಸಮಿತಿ ಪೆರಾಜೆ ವತಿಯಿಂದ ಇತಿಹಾಸ ಪ್ರಸಿದ್ಧ ಕೋಳಿಕ್ಕಿಮಲೆ ಬೆಟ್ಟಕ್ಕೆ ಚಾರಣ ಹಮ್ಮಿಕೊಳ್ಳಲಾಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಕೇಂದ್ರ ಸರ್ಕಾರವು ದೇಶದ ಭದ್ರತಾ ವಿಷಯದಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಜಮ್ಮು ಕಾಶ್ಮೀರದಲ್ಲಿದ್ದ ಸಂವಿಧಾನದ 370ನೇ ವಿಧಿಯ ತಿದ್ದುಪಡಿ ಹಾಗೂ ಬಹಳಷ್ಟು ವರ್ಷಗಳ ಜನರ ಧಾರ್ಮಿಕ ನಂಬಿಕೆಯ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ ನೀಡಿದ ಅನುಮತಿ ಹಾಗೂ ಪೆರಾಜೆ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಸುದೀರ್ಘ ಕಾಲದ ಆಡಳಿತದ ಹಿನ್ನೆಲೆಯಲ್ಲಿ ಒಟ್ಟಾಗಿ ಸಂತೋಷದಿಂದ ಗ್ರಾಮದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೋಳಿಕ್ಕಿಮಲೆ ಬೆಟ್ಟಕೆ ಚಾರಣ ಬಂದೆವು ಎಂದು ತಿಳಿಸಿದರು.

25 ವರ್ಷಗಳ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ಗ್ರಾಮದಲ್ಲಿ ಸುದೀರ್ಘ ಕಾಲದ ಆಡಳಿತ ನಡೆಸಲು ಸಾಧ್ಯವಾಯಿತು. ಇಂದು ಗ್ರಾಮದಲ್ಲಿ ಜನಸಾಮಾನ್ಯರಿಗೆ ಆಧುನಿಕ ಸೌಲಭ್ಯಗಳು ತಲುಪಿವೆ ಇದರೊಂದಿಗೆ ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರದಲ್ಲಿ ಬೆಳೆಯುವ ಹಾಗೂ ಪರಿಸರವನ್ನು ಸಂರಕ್ಷಿಸುವ ಪಾಠವನ್ನು ತಿಳಿಹೇಳಿ ಭಾರತಾಂಬೆಯ ಮಕ್ಕಳಾದ ನಾವು ಮಣ್ಣನ್ನು ಗೌರವಿಸಬೇಕು ಎಂದು ಕರೆಕೊಟ್ಟರು. ಈ ಸಂದರ್ಭದಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಗ್ರಾಮ ಪಂಚಾಯತ್ ಸದಸ್ಯರಾದ, ಪ್ರಕಾಶ್ ದೊಡ್ಡಡ್ಕ , ಉದಯಚಂದ್ರ ಕುಂಬಳಚೇರಿ, ಶಿವಕುಮಾರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ನಿರ್ದೇಶಕರಾದ ಅಶೋಕ್ ಪೆರುಮುಂಡ, ಪ್ರಮೀಳಾ ಬಂಗಾರಕೋಡಿ, ದೀನರಾಜ್ ದೊಡ್ಡಡ್ಕ, ಕಿರಣ ಬಂಗಾರಕೋಡಿ, ಯುವ ಕೋಟೆ ಯುವಕಮಂಡಲ ಮುಖ್ಯ ಸಲಹೆಗಾರ ಶುಭಾಶ್ ಬಂಗಾರಕೋಡಿ, ಪೆರಾಜೆ ಬಿ.ಜೆ.ಪಿ ಯುವ ಮೋರ್ಚ ಕಾರ್ಯದರ್ಶಿ ಮಹೇಶ್ ಮೂಲೆಮಜಲು, ಗ್ರಾಮ ಸಮಿತಿ ಕಾರ್ಯದರ್ಶಿ ಧನಂಜಯ ಕೋಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

-ಕಿರಣ್ ಕುಂಬಳಚೇರಿ