ಮಡಿಕೇರಿ, ಫೆ. 25: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾ.ಪಂ. ನೌಕರರ ಸಂಘ ಅನಿರ್ಧಿಷ್ಟಾವಧಿ ಧರಣಿ ಮುಷ್ಕರವನ್ನು ಆರಂಭಿಸಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಘಟಕ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನೌಕರರಿಂದ ದುಡಿಸಿಕೊಳ್ಳುವ ಆಸಕ್ತಿಯನ್ನು ತೋರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದರು.

ಚುನಾಯಿತ ಸದಸ್ಯರ ಒತ್ತಡಕ್ಕೆ ಒಳಗಾಗುವ ಅಧಿಕಾರಿಗಳು ಸಿಬ್ಬಂದಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಕೆಲವು ಪಂಚಾಯಿತಿ ಗಳಲ್ಲಿ 5 ತಿಂಗಳುಗಳಿಂದ ವೇತನ ಪಾವತಿಯಾಗದೆ ಬಾಕಿ ಉಳಿದಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲವು ಗ್ರಾ.ಪಂ.ಗಳಲ್ಲಿ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕುವ ಕಾರ್ಯ ನಡೆಯುತ್ತಿದ್ದು; ಇದನ್ನು ವಿರೋಧಿಸಿ ಅಂತಹ ಪಂಚಾಯಿತಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಬಳಿಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಮಡಿಕೇರಿ ತಾಲೂಕು ಖಜಾಂಚಿ ಎಂ.ಕೆ. ವಸಂತ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.