ಮಡಿಕೇರಿ, ಫೆ. 25: ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ 2002-03ನೇ ಸಾಲಿನ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾಲೇಜು ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳು ಉದ್ಘಾಟಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದವನ್ನು ಸನ್ಮಾನಿಸಿ ಗೌರವಿಸಿದರು.

ಹಳೆ ವಿದ್ಯಾರ್ಥಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕರು, ಶಿಕ್ಷಣ ಪಡೆದು ತೆರಳಿದ ನಂತರವೂ ಕಾಲೇಜು, ಉಪನ್ಯಾಸಕರ ಬಗ್ಗೆ ಅಭಿಮಾನ, ಗೌರವ ಹೊಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜು ಪ್ರಾಂಶುಪಾಲ ಪಿ.ಟಿ. ಶಾಜಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಬಿ.ಟಿ. ಮಹೇಶ್, ಬಿ.ಎಸ್. ಭಾಗ್ಯ, ಎಂ.ಕೆ. ಸುಜಯ್, ಆರ್. ಸುರೇಶ್ ನಾಯಕ್, ಹೆಚ್.ವೈ. ಪುಟ್ಟರಾಜು ಇದ್ದರು. ಎಂ.ಎಸ್. ವಾಣಿ ನಿರೂಪಿಸಿ, ರೇಷ್ಮ ವಂದಿಸಿದರು.