ಸೋಮವಾರಪೇಟೆ, ಫೆ. 25: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಆಲೂರು ಸಿದ್ದಾಪುರದ ಅರೆಭಾಷೆ ಗೌಡ ಸಮಾಜ, ಅರೆಭಾಷೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಆಶ್ರಯದಲ್ಲಿ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರದಲ್ಲಿ ಆಯೋಜಿಸಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ವಿಚಾರಗೋಷ್ಠಿ, ಅರೆಭಾಷೆ ಸಂಸ್ಕøತಿಯ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿತು. ಪುತ್ತೂರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ‘ಅರೆಭಾಷೆ ಮತ್ತು ಸಂಸ್ಕøತಿ ಸಂವಹನ ಅಂದು-ಇಂದು-ಮುಂದು’ ವಿಷಯದ ಬಗ್ಗೆ ಮಾತನಾಡಿ, ಗೌಡ ಎನ್ನುವದು ಮರ್ಯಾದೆಯ ಪದ. ಗೌಡ ಸಮುದಾಯ ಕೃಷಿಯನ್ನೇ ನಂಬಿಕೊಂಡು ಬದುಕಿ ಬಂದಿದೆ. ಯುವ ಜನಾಂಗ ಅರೆಭಾಷೆ ಸಂಸ್ಕøತಿಯನ್ನು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸಬೇಕು ಎಂದರು.
‘ಅರೆಭಾಷೆ ಮತ್ತು ಸಂಸ್ಕøತಿ ಪ್ರಸರಣದಲ್ಲಿ ಅವ್ವ’ ವಿಷಯದ ಬಗ್ಗೆ ವಿಚಾರ ಮಂಡಿಸಿದ ಸುಳ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಮೇಲ್ವಿಚಾರಕಿ ಶೈಲಜಾ ದಿನೇಶ್ ಅವರು, ಮನೆಯಲ್ಲಿ ಮಾತೃಭಾಷೆಯ ಬಳಕೆಯಾಗುವದು ತಾಯಿಯಿಂದಲೇ ಹೆಚ್ಚು. ಸಂಸ್ಕøತಿ ಯನ್ನು ವರ್ಗಾಯಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಸಂಸ್ಕøತಿಯ ಬಗ್ಗೆ ಆಕೆ ಉದಾಸೀನತೆ ತೋರಿದರೆ ಸಂಸ್ಕøತಿಯ ಬೆಳವಣಿಗೆ ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಎಲೋಷಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಬದಿಕಾನ ಮಾತನಾಡಿ, ಪಠ್ಯಪುಸ್ತಕದಲ್ಲಿ ಅರೆಭಾಷೆ ಅಳವಡಿಕೆಯಾಗಬೇಕು. ಇದಕ್ಕೆ ಬೇಕಾದ ಸಾಹಿತ್ಯಗಳು ಅರೆಭಾಷೆಯಲ್ಲಿ ಮೂಡಿಬರಬೇಕು ಎಂದರು. ಆಯಾ ಪ್ರದೇಶಕ್ಕೆ ಭಾಷೆಗಳು ಬದಲಾಗುತ್ತಿರುತ್ತವೆ. ಎಲ್ಲವನ್ನೂ ಒಂದುಗೂಡಿಸಿ ಸಮಗ್ರವಾಗಿ ಸಾಹಿತ್ಯಗಳು ರಚನೆಯಾಗಬೇಕು ಎಂದರು. ಉಪನ್ಯಾಸಕ ಪಟ್ಟಡ ಶಿವ ಕುಮಾರ್ ನಿರೂಪಿಸಿದರೆ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ, ಪತ್ರಕರ್ತ ಕುಡೆಕಲ್ ಸಂತೋಷ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಚೊಕ್ಕಾಡಿ ಪ್ರೇಮಾ ರಾಘವಯ್ಯ ವಂದಿಸಿದರು.