ಸೋಮವಾರಪೇಟೆ, ಫೆ. 25: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ, ಆಲೂರುಸಿದ್ದಾಪುರದ ಅರೆಭಾಷೆ ಗೌಡ ಸಮಾಜದ ಸಹಭಾಗಿತ್ವದಲ್ಲಿ ತಾಲೂಕಿನ ಸಂಗಯ್ಯನಪುರದಲ್ಲಿ ಆಯೋಜಿಸಲಾಗಿದ್ದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ಕವಿಗೋಷ್ಠಿ, ಕೇಳುಗರ ಗಮನ ಸೆಳೆಯಿತು. ಎಡಕೇರಿ ವಿಶ್ವನಾಥ ತಮ್ಮ ‘ಸೋಮವಾರಪೇಟೆಯವು’ ಕವನದಲ್ಲಿ ತಾವು ಹುಟ್ಟಿದ ಊರು ಸ್ವರ್ಗಕ್ಕೆ ಸಮಾನ ಎಂದರೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ, ಆಲೂರುಸಿದ್ದಾಪುರ ಗ್ರಾಮದ ವೈಶಿಷ್ಟ್ಯಗಳನ್ನು ಕವನದ ಸಾಲುಗಳಲ್ಲಿ ತೆರೆದಿಟ್ಟರು. ಲೀಲಾ ದಾಮೋದರ ಕವನ ‘ಅದೈತ’ದಲ್ಲಿ ಎರಡು ಬೆಟ್ಟಗಳನ್ನು ನದಿಯೊಂದು ಬೇರ್ಪಡಿಸಿದ ದೃಷ್ಟಾಂತವನ್ನು ಇಟ್ಟುಕೊಂಡು, ನದಿಯಲ್ಲಿ ನೀರು ಕಡಿಮೆಯಾದಾಗ ಎರಡೂ ಬೆಟ್ಟಗಳಿಗೆ ತಾವಿಬ್ಬರೂ ಒಂದೇ ಎಂಬ ಭಾವನೆ ಮೂಡಿಸಿತು ಎಂಬ ಸಂದೇಶವನ್ನು ನೀಡಿದರು. ಸಂಜೀವ ಕುದ್ಪಾಜೆ ‘ಹಳೆಯ ತಲೆಮಾರಿನ ಸರಳ ಜೀವನ ಹಾಗೂ ಇಂದಿನ ಯುವ ಜನಾಂಗದ ವಿಲಾಸಿ ಜೀವನದ ನಡುವೆ ಇರುವ ವ್ಯತ್ಯಾಸವನ್ನು ತಿಳಿ ಹಾಸ್ಯದ ಮೂಲಕ ತೆರೆದಿಟ್ಟರು.
ವಿನೋದ್ ಮೂಡಗದ್ದೆ ‘ನಮ್ಮೂರ ಜಾತ್ರೆ’ ಕವನದಲ್ಲಿ ಹಳೆಯ ಕಾಲದ ಜಾತ್ರೆಯಲ್ಲಿದ್ದ ಸಂಭ್ರಮವನ್ನು ಮೆಲುಕು ಹಾಕಿದರಲ್ಲದೇ, ಇಂದಿನ ದಿನಗಳಲ್ಲಿ ಯುವ ಜನಾಂಗ ಗ್ರಾಮಗಳನ್ನು ಬಿಟ್ಟು ಪಟ್ಟಣ ಸೇರಿ ಜಾತ್ರೆಗಳೂ ಕಳೆಗುಂದು ತ್ತಿರುವ ಬಗ್ಗೆ ವಿಷಾದಿಸಿದರು. ಕೃಪಾ ದೇವರಾಜ್ ತಮ್ಮ ‘ದಿಬ್ಬಣದೂರಲಿ ಸಾವಿನ ಸೂತಕ’ ಕವನದಲ್ಲಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ಬಗ್ಗೆ ಬೆಳಕು ಚೆಲ್ಲಿದರು.
ಹರ್ಷಿತ ಪೇರಿಯನ ತಮ್ಮ ‘ರೈತನ ಬದುಕು’ ಕವನದಲ್ಲಿ ರೈತಾಪಿ ಜೀವನದ ಮೇಲೆ ಬೆಳಕು ಚೆಲ್ಲಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ವಹಿಸಿದ್ದರು. ಕವಯತ್ರಿ ಸ್ಮಿತಾ ಅಮೃತರಾಜ್ ನಿರೂಪಿಸಿದರೆ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ ವಂದಿಸಿದರು.