ಕೂಡಿಗೆ, ಫೆ. 25: ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ನಿರ್ದೇಶಕರು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಸ್.ಎ. ಮುರಳೀಧರ್ ಅವರು ತಮ್ಮ ತಾಯಿ ಪಾರ್ವತಮ್ಮ ಅವರ ನೆನಪಿನಲ್ಲಿ ಸ್ಥಾಪಿಸಿರುವ ಅಂತರ್ ಜಿಲ್ಲಾ ಪಾಲಿಟೆಕ್ನಿಕ್ ಭಾವಗೀತಾ ಸ್ಪರ್ಧಾ ಕಾರ್ಯಕ್ರಮ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ವಿ. ಶಿವಪ್ಪ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಶಿಕ್ಷಣದ ಭರಾಟೆಯಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಮನರಂಜನೆ ನೀಡುವುದರಿಂದ ಕಲಿಕೆಯ ಮಟ್ಟವು ಹೆಚ್ಚಿಸುತ್ತದೆ ಎಂದರು.
ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ಸಾಗರ್ ಮಾತನಾಡಿ, ಯಾವುದೇ ಶಿಕ್ಷಣವೇ ಆಗಲೀ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಇಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಲ್ಲಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಕಾರ್ಯಗಳಿಗೆ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ ಹಾಗೂ ಉತ್ತಮ ಸಮಾಜದಲ್ಲಿ ಹೆಜ್ಜೆಗುರುತು ಮೂಡಿಸಲು ಸಾಧ್ಯ ಎಂದರು.
ಸ್ಪರ್ಧೆಯ ತೀರ್ಪುಗಾರರಾಗಿ ರಮ್ಯರಾಜೀವ್, ರಜನಿ ಪ್ರದೀಪ್, ವಿನಯ್ ರಾಜಶೇಖರ್, ರಮ ವಿಜಯೇಂದ್ರ ಅವರು ಕಾರ್ಯನಿರ್ವಹಿಸಿದರು.
ಭಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಹತ್ತು ಪಾಲಿಟೆಕ್ನಿಕ್ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೈಸೂರಿನ ಲತೇಶ್ ಶೆಟ್ಟಿ ಪ್ರಥಮ ಸ್ಥಾನ ಹಾಗೂ ಮೈಸೂರು ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ತಂಶಿಯಾ ತಿಂಸಾಗರ್ ಅವರು ದ್ವಿತೀಯ ಸ್ಥಾನ ಪಡೆದರು.
ಮುಖ್ಯ ಅತಿಥಿಗಳಾಗಿ ಸಿವಿಲ್ ವಿಭಾಗದ ಉಪನ್ಯಾಸಕ ಎನ್.ಎಸ್. ಲೋಕೇಶ್, ಎಲೆಕ್ಟ್ರಿಕಲ್ ವಿಭಾಗದ ಹೆಚ್ಒಡಿ ಉಮಾಪತಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಮೇರಿ, ಉಪನ್ಯಾಸಕರಾದ ಸ್ಮಿತಾ, ಸುನೀತ ಮತ್ತಿತರರು ಇದ್ದರು.