*ಗೋಣಿಕೊಪ್ಪಲು, ಫೆ. 23: ಹೆಣ್ಣು ಮಕ್ಕಳು ಸ್ವಚ್ಛತೆ ಕಾಪಾಡುವ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರು ಅನಾಮಿವ ಫೌಂಡೇಷನ್ನ ಅಳಮೇಂಗಡ ಸಂಜನ್ ಹೇಳಿದರು.
ಬಾಳೆಲೆ ವಿಜಯಲಕ್ಷ್ಮಿ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ ಮುಟ್ಟಿನ ಆರೋಗ್ಯ ನಿರ್ವಹಣೆ ಕುರಿತ ವೈಜ್ಞಾನಿಕ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಮುಟ್ಟು ನೈಸರ್ಗಿಕ ಕ್ರಿಯೆ. ಅದರ ಬಗ್ಗೆ ಯಾವುದೇ ಸಂಕೋಚ ಸಲ್ಲದು. ಈ ಅವಧಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಸಣ್ಣುವಂಡ ಸಾನಿಯ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಮುಟ್ಟು ಎನ್ನುವುದು ಸೂತಕ. ಅದು ಅಮಂಗಳಕರ ಎಂಬ ಭಾವನೆ ದಟ್ಟವಾಗಿದೆ. ಇಂತಹ ಭಾವನೆಯನ್ನು ಹೋಗಲಾಡಿಸಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮ ಸಂಘಟಕ ಅಳಮೇಂಗಡ ಸುಜಯ್ ಮಾತನಾಡಿ, ಕೊಡಗಿನ ಬುಡಕಟ್ಟು ಜನರ ಮಹಿಳೆಯರಲ್ಲಿ ಸ್ವಚ್ಛತೆ ಬಗ್ಗೆ ಅರಿವಿಲ್ಲ. ಇದರಿಂದಾಗಿ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತಿದ್ದಾರೆ. ಇದರ ಬಗ್ಗೆ ಅರಿವು ಮೂಡಿಸಲು ಅನಾಮಿವ ಫೌಂಡೇಷನ್ ನಿರಂತರವಾಗಿ ಒಡನಾಟ ಇಟ್ಟುಕೊಳ್ಳಲಿದೆ ಎಂದು ತಿಳಿಸಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಜಯಲಕ್ಷ್ಮಿ ಪಿ.ಯು. ಕಾಲೇಜಿನ ಹೆಣ್ಣು ಮಕ್ಕಳು ಸೇರಿದಂತೆ 120 ವಿದ್ಯಾರ್ಥಿನಿಯರು ಮಾಹಿತಿ ಪಡೆದುಕೊಂಡರು.