ವೀರಾಜಪೇಟೆ, ಫೆ. 23: ವರ್ತಮಾನ ವಿಚಾರಗಳ ಬಗ್ಗೆ ಮಾತನಾಡುವುದು ಕಷ್ಟ ಸಾಧ್ಯ. ನಾವು ಜಾಗರೂಕರಾಗಿ ಮಾತನಾಡುವುದನ್ನು ಮೊದಲು ಕಲಿಯಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿ ಟೆಲೆಕ್ಸ್ ಹೇಳಿದರು.
ವೀರಾಜಪೇಟೆ ಸರ್ಕಾರಿ ಕಾಲೇಜು, ರಾಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ, ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಮಡಿಕೇರಿ ಪ್ರೆಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಹೋಲಿಕೆಯ ವಿವಿಧ ಆಯಾಮಗಳು ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಧ್ಯಮ ಹಾಗೂ ರಾಜಕೀಯಕ್ಕೆ ಒಂದು ಮೌಲ್ಯ ಇದೆ. ಎರಡು ಕ್ಷೇತ್ರದಲ್ಲೂ ಶುದ್ಧೀಕರಣದ ಅವಶ್ಯಕತೆ ಇದೆ ಎಂದು ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕೀಯ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸರಿಸಮಾನವಾದ ಹೋಲಿಕೆ ಇದೆ. ಎರಡು ಕ್ಷೇತ್ರಗಳಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಲು ವಿಪುಲ ಅವಕಾಶಗಳಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಮಾಧ್ಯಮ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆ ಇರುವುದಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಜಿ.ಎಂ. ಥೋಮಸ್, ಉಪನ್ಯಾಸಕರು ಗಳಾದ ಪ್ರೊ. ದಿವ್ಯ, ವೇಣು ಗೋಪಾಲ್, ಡೀನಾ, ಕವನಾ, ವನಿತ್ ಕುಮಾರ್ ಉಪಸ್ಥಿತರಿದ್ದರು.